ತ್ಯಾಜ್ಯ ವಿಲೇವಾರಿ ವಾಹನಕ್ಕೇ ಕಸ ನೀಡಿ – ಅಧ್ಯಕ್ಷ ಮಹಮ್ಮದ್ ಶರೀಫ್ ಮನವಿ
ಬಂಟ್ವಾಳ: ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಕಸ ಸಾಗಾಟಕ್ಕೆ ವಾಹನ ಕೊರತೆ ನೀಗಿಸಲು ಏಳು ಹೊಸ ಆಟೊ ಟಿಪ್ಪರ್ ಗಳು ಬಂದಿದ್ದು, ಇವುಗಳನ್ನು ಸಾರ್ವಜನಿಕರ ಸೇವೆಗಾಗಿ ಶುಕ್ರವಾರ ಅಧ್ಯಕ್ಷ ಮಹಮ್ಮದ್ ಶರೀಫ್ ಪುರಸಭೆಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸ್ವಚ್ಛ ಬಂಟ್ವಾಳ ಹಾಗೂ ತ್ಯಾಜ್ಯ ವಿಲೇವಾರಿಗೆ ಗರಿಷ್ಠ ಆದ್ಯತೆಯನ್ನು ನೀಡಲಾಗುತ್ತಿದ್ದು, ಇದೀಗ ಏಳು ವಾಹನಗಳನ್ನು ಒದಗಿಸಲಾಗಿದೆ. ಒಟ್ಟು 10 ವಾಹನಗಳು ಇನ್ನು ಪುರಸಭೆಯ ಎಲ್ಲ ವಾರ್ಡ್ ಗಳಲ್ಲಿ ಸಂಚರಿಸಿ, ಕಸ ವಿಲೇವಾರಿಗೆ ಸಹಕರಿಸಲಿವೆ. ಸಾರ್ವಜನಿಕರು ಪುರಸಭೆಯ ವಾಹನಗಳಿಗೆ ಹಸಿ, ಒಣ ಕಸ ಪ್ರತ್ಯೇಕಿಸಿ ನೀಡಿ ಸಹಕರಿಸಬೇಕು ಎಂದರು. ಈಗಾಗಲೇ ದೊಡ್ಡದಾದ ಕಾಂಪ್ಯಾಕ್ಟ್ ವಾಹನವನ್ನು ಕಸ ವಿಲೇವಾರಿಗಾಗಿ ಒದಗಿಸಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಪ್ರತ್ಯೇಕವಾಗಿ ಸಿಬ್ಬಂದಿ ನಿಯೋಜಿಸಿ ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಸರಳವಾಗಿಸುವ ಪ್ರಯತ್ನ ಮಾಡಲಾಗುತ್ತದೆ. ಕಸವನ್ನು ಕಂಚಿನಡ್ಕಪದವಿನಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಕಲ ಕ್ರಮ ಕೈಗೊಳ್ಳಲಾಗಿದ್ದು, 1.3 ಕೋಟಿ ರೂ ಮೊತ್ತದ ಕಾಮಗಾರಿಗೆ ಟೆಂಡರ್ ಅನುಮತಿಗಾಗಿ ಕಳುಹಿಸಲಾಗಿದೆ ಎಂದು ಶರೀಫ್ ಹೇಳಿದರು. ಸಾರ್ವಜನಿಕರು ಪುರಸಭೆಯೊಂದಿಗೆ ಸ್ಪಂದಿಸಿ, ರಸ್ತೆ ಬದಿಯಲ್ಲಿ ಕಸ ಬಿಸಾಡದೆ, ಪುರಸಭೆ ವ್ಯಾಪ್ತಿಯಲ್ಲಿ ಓಡಾಡುವ ವಾಹನಕ್ಕೆ ನೀಡಬೇಕು.ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ ಶರೀಫ್, ಯಾವುದೇ ವಾರ್ಡ್ ನಲ್ಲೂ ಕಸ ವಿಲೇವಾರಿ ವಾಹನ ಬರುವುದಿಲ್ಲ ಎಂಬ ದೂರು ಬಾರದಂತೆ ನೋಡಿಕೊಳ್ಳಲಾಗುವುದು. ಎಲ್ಲ 10 ವಾಹನಗಳೂ ಸೇರಿದಂತೆ ಒಟ್ಟು 14 ಡ್ರೈವರ್ ಗಳನ್ನು ನೇಮಿಸಲಾಗಿದೆ. ಪುರಸಭೆಯಲ್ಲಿ 58 ಪೌರಕಾರ್ಮಿಕರು ಅಗತ್ಯವಿದ್ದು, ಈಗ 38 ಮಂದಿಯಷ್ಟೇ ಇದ್ದಾರೆ. ಒಂದು ವಾರದಲ್ಲಿ ಈ ಸಮಸ್ಯೆಯೂ ಬಗೆಹರಿಯಲಿದೆ ಎಂದರು. ಬೆಳಗ್ಗೆ 6.30ರಿಂದಲೇ ತ್ಯಾಜ್ಯ ಕೊಂಡೊಯ್ಯುವ ವಾಹನಗಳು ಓಡಾಟ ಆರಂಭಿಸಲಿವೆ ಎಂದರು. ಈ ಸಂದರ್ಭ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯಾಧಿಕಾರಿ ಜಯಶಂಕರ್, ಮ್ಯಾನೇಜರ್ ಲೀಲಾವತಿ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಸಿಬ್ಬಂದಿ ರಝಾಕ್, ಸ್ಥಳೀಯರಾದ ವೆಂಕಪ್ಪ ಪೂಜಾರಿ, ಹಾಗೂ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.
Be the first to comment on "ಕಸ ಸಾಗಾಟಕ್ಕೆ ಹೊಸ ಏಳು ವಾಹನ: ಬಂಟ್ವಾಳ ಪುರಸಭೆ ಎಲ್ಲ ವಾರ್ಡ್ ಗಳ ತ್ಯಾಜ್ಯ ವಿಲೇವಾರಿಗೆ ಇದು ಪೂರಕ – ಅಧ್ಯಕ್ಷ ಶರೀಫ್"