ಪೊಲೀಸರ ಮೇಲೆ ಗುಂಡು ಹಾರಿಸಿದ ಪ್ರಕರಣದ ಸಂಪೂರ್ಣ ವಿವರ
ಬಂಟ್ವಾಳ: ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕೆಲ ಭಾಗಗಳಲ್ಲಿ ತಮ್ಮನ್ನು ತಾವೇ ಡಿ ಗ್ಯಾಂಗ್ ಎಂದು ಕರೆದುಕೊಂಡು ದುಷ್ಕೃತ್ಯ ಎಸಗುತ್ತಿದ್ದ ತಂಡವೊಂದನ್ನು ಕೇರಳದಿಂದ ತಪ್ಪಿಸಿಕೊಂಡು ಕರ್ನಾಟಕದ ಗಡಿ ಪ್ರದೇಶವಾದ ಸಾಲೆತ್ತೂರು ಬಳಿ ಬರುವ ಸಂದರ್ಭ ಅವರನ್ನು ವಿಟ್ಲ ಪೊಲೀಸ್ ಎಸ್.ಐ. ವಿನೋದ್ ರೆಡ್ಡಿ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಭಾರತೀಯ ಶಸ್ತ್ರ್ತಾಸ್ತ್ರ ಕಾಯ್ದೆ ಸಹಿತ ವಿವಿಧ ಪ್ರಕರಣಗಳನ್ವಯ ಕೇರಳದ ನಟೋರಿಯಸ್ ಗ್ಯಾಂಗ್‌ನ ಮಂಗಲ್ಪಾಡಿ ನಿವಾಸಿಗಳಾದ ಅಬ್ದುಲ್ ಲತೀಫ್ (23), ಮೀಯಪದವು ನಿವಾಸಿ ಶಾಕೀರ್ (23), ಅಡ್ಕಂತಗುರಿ ನಿವಾಸಿ ಅಸ್ಪಾಕ್(25) ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧಿತರಿಂದ ಒಂದು ಕಾರು, 1 ಪಿಸ್ತೂಲ್, 13 ಸಜೀವ ಗುಂಡುಗಳು, 1 ಡ್ರಾಗರ್ ವಶಪಡಿಸಲಾಗಿದೆ.
ಕೇರಳದ ಉಪ್ಪಳದ ಕ್ಲಬ್‌ನಲ್ಲಿ ನಿನ್ನೆ ಈ ತಂಡದಿಂದ ಗುಂಡಿನ ದಾಳಿ ನಡೆಸಿತ್ತು. ಕೇರಳ ಪೊಲೀಸರು ಆರೋಪಿಗಳನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಮೀಯಪದವು ಎಂಬಲ್ಲಿ ಕೇರಳ ಪೊಲೀಸರ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದರಿಂದ ಪೊಲೀಸ್ ಜೀಪಿಗೆ ಹಾನಿಯಾಗಿದೆ. ಬಳಿಕ ತಂಡ ಕರ್ನಾಟಕ ಕಡೆಗೆ ಆಗಮಿಸಿದೆ. ಈ ಬಗ್ಗೆ ಕೇರಳ ಪೊಲೀಸರು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕರ್ನಾಟಕ ಹಾಗೂ ಕೇರಳದಲ್ಲಿ ಅಲ್ಲಲ್ಲಿ ನಾಕಾಬಂಧಿ ಅಳವಡಿಸಲಾಗಿತ್ತು. ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಕರ್ನಾಟಕ ಕೇರಳ ಗಡಿ ಭಾಗವಾದ ಸಾಲೆತ್ತೂರು ಸಮೀಪದ ಕಟ್ಟತ್ತಿಲ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ರಾತ್ರಿಯಿಂದಲೇ ನಾಕಬಂಧಿ ಅಳವಡಿಸಿ, ಕಾಯುತ್ತಿದ್ದರು. ಬೆಳಿಗ್ಗಿನ ಜಾವ 4 ಗಂಟೆಗೆ ಕಾರು ಆಗಮಿಸಿದ್ದು ಈ ಸಂದರ್ಭ ನಿಲ್ಲಿಸಲು ಮುಂದದಾಗ ಕಾರಿನಲ್ಲಿದ್ದವರು ಗುಂಡು ಹಾರಿಸಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ವೆಲೆಂಟೈನ್ ಡಿ ಸೋಜ, ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣೆ ಎಸೈ ಪ್ರಸನ್ನ, ಸಿಬ್ಬಂದಿಗಳಾದ ರವೀಶ್, ಡ್ಯಾನಿ ಫ್ರಾನ್ಸಿಸ್ ತಾವ್ರೋ, ಪ್ರಸನ್ನ, ಲೋಕೇಶ್, ಪ್ರತಾಪ್, ಹೇಮರಾಜ್, ಹೇಮರಾಜ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಕೇರಳ ರಾಜ್ಯದ ಕಾಸರಗೋಡು, ಪೈವಳಿಕೆ ಮತ್ತು ಮಿಯಪದವು ಪ್ರದೇಶಗಳಲ್ಲಿ ತಮ್ಮನ್ನು ಡಿ ಗ್ಯಾಂಗ್ ನವರು ಎಂಬುದಾಗಿ ಕರೆಸಿಕೊಳ್ಳುತ್ತಿದ್ದ ಯುವಕರ ಗುಂಪಿದು. ಈ ಯುವಕರು ಪಿಸ್ತೂಲನ್ನು ಪ್ರದರ್ಶಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಇದರ ಅಧಾರದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳ ಕೇರಳದ ನಟೋರಿಸ್ ಗ್ಯಾಂಗ್‌ನವರಾಗಿದ್ದು, ಹಲವು ಪ್ರಕರಣದ ಆರೋಪಿಗಳಾಗಿದ್ದಾರೆ.
Be the first to comment on "ಕೇರಳದ ಕುಖ್ಯಾತ ಗ್ಯಾಂಗ್ ನ ಮೂವರ ಬಂಧಿಸಿದ ವಿಟ್ಲ ಪೊಲೀಸರು: ಕೇರಳದಿಂದ ಪರಾರಿಯಾದವರು, ಸಾಲೆತ್ತೂರಿನಲ್ಲಿ ಸಿಕ್ಕಿಬಿದ್ದರು"