19ರಂದು ಚಾಣಕ್ಯಪ್ರಪಂಚ, 20ರಂದು ಹಕ್ಕಿಕತೆ, 21ರಂದು ಅಬ್ಬಲ್ಲಿಗೆ ಪ್ರದರ್ಶನ
ಬಂಟ್ವಾಳ: ಮಾರ್ಚ್ 19ರಿಂದ 21ರವರೆಗೆ ಸಂಜೆಯ ಬಳಿಕ ಮೂರು ದಿನಗಳ ಕಾಲ ಮಂಚಿ ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ ನಡೆಯಲಿದೆ ಎಂದು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಕಜೆ ರಾಮಚಂದ್ರ ಭಟ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನಡೆಯುವ ನಾಟಕೋತ್ಸವವನ್ನು 19ರಂದು ಸಂಜೆ 6:30ಕ್ಕೆ ವಿಟ್ಲ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ.ಅನಂತಕೃಷ್ಣ ಹೆಬ್ಬಾರ್ ಉದ್ಘಾಟಿಸಲಿದ್ದು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಬಂಟ್ವಾಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಮೋಹನ್ ರಾವ್, ಮಂಚಿ ನೂಜಿಬೈಲ್ ಅನುದಾನಿತ ಹಿ.ಪ್ರಾ. ಶಾಲೆಯ ಸಂಚಾಲಕ ಶಾಂತಲಾ ಎನ್. ಭಟ್ ನೂಜಿಬೈಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ 7 ಗಂಟೆಗೆ ಕೆ.ವಿ.ಸುಬ್ಬಣ್ಣ ರಚನೆಯ, ಬಿ.ಆರ್.ವೆಂಕಟರಮಣ ಐತಾಳರ ನಿರ್ದೇಶನದಲ್ಲಿ ಶಿವಮೊಗ್ಗ ರಂಗಾಯಣ ಅಭಿನಯಿಸುವ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.
ಮಾ.20ರಂದು ಸಂಜೆ 7 ಗಂಟೆಗೆ ಗಣೇಶ ಮಂದಾರ್ತಿ ಹಾಗೂ ಶ್ರವಣ್ ಹೆಗ್ಗೋಡು ನಿರ್ದೇಶನದಲ್ಲಿ ನಾ. ಡಿ.ಸೋಜರವರ ಕಾದಂಬರಿ ಆಧಾರಿತ, ಎಸ್.ಮಾಲತಿಯವರ ರಂಗರೂಪಕ ಆಧಾರಿತ, ಶಿವಮೊಗ್ಗ ರಂಗಾಯಣ ಅಭಿನಯಿಸುವ ‘ಹಕ್ಕೀ ಕತೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮಾ.21ರಂದು ಸಂಜೆ 6:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜೆಕಳ ಗಿರೀಶ್ ಭಟ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ, ನ್ಯಾಯವಾದಿ ಶಶಿರಾಜ ಕಾವೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಸಹಾಯಕ ನಿರ್ದೇಶಕ ರಾಜೇಶ್ ಜಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 7 ಗಂಟೆಗೆ ಕಿನ್ನರ ಮೇಳ, ತುಮುರಿ ಅಭಿನಯಿಸುವ ಯಶವಂತ ಚಿತ್ತಾಲರ ‘ಅಬೋಲಿನ್’ ಕಥೆ ಆಧಾರಿತ, ಕೆ.ಜಿ.ಕೃಷ್ಣ ಮೂರ್ತಿ ಅವರು ರಂಗ ರೂಪಾಂತರಗೊಳಿಸಿ ನಿರ್ದೇಶಿಸಿರುವ ‘ಅಬ್ಬಲ್ಲಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಂಚಿ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಜೊತೆ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ಸದಸ್ಯ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.
Be the first to comment on "ಮಂಚಿಯ ನೂಜಿಬೈಲು ಶಾಲೆಯಲ್ಲಿ ಬಿ.ವಿ.ಕಾರಂತ ನೆನಪಿಗೆ ಮೂರು ದಿನಗಳ ನಾಟಕೋತ್ಸವ"