ಬಂಟ್ವಾಳ: ಮುಂದಿನ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ ರಾಜ್ಯದ ಎಲ್ಲ ಮನೆಗಳಿಗೂ ಕುಡಿಯುವ ನೀರನ್ನು ತಲುಪಿಸುವ ಕೆಲಸ ಮಾಡಲಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ 12 ಗ್ರಾಮ ಪಂಚಾಯತ್ ವ್ಯಾಪ್ತಿಗಳಿಗೆ ಒಳಪಡುವ 62 ಕೋಟಿ ರೂ ವೆಚ್ಚದ ಸರಪಾಡಿ ಹಾಗೂ ನರಿಕೊಂಬು ಬಹು ಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯ ಉದ್ಘಾಟನೆಯನ್ನು ಭಾನುವಾರ ಬಂಟ್ವಾಳದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮನೆಗಳಿಗೂ ನೀರು ತಲುಪಬೇಕು ಎಂಬ ಕೇಂದ್ರ ಸರ್ಕಾರದ ಯೋಜನೆಯಾದ ಮನೆ ಮನೆಗೆ ಗಂಗೆ ಪರಿಕಲ್ಪನೆಯಂತೆ ನೀರೊದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಹೊಸದಾಗಿ ಮಂಗಳೂರಿಗೆ 140 ಕೋಟಿ ರೂ, ಬಂಟ್ವಾಳ ಕ್ಷೇತ್ರಕ್ಕೆ 60 ಕೋಟಿ ರೂ ವೆಚ್ಚದ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಮಂಜೂರಾಗಿದೆ ಎಂದರು.
ದೇಶದಲ್ಲಿನ ಪ್ರತಿಯೊಬ್ಬ ನಾಗರಿಕರಿಗು ಶುದ್ಧ ಕುಡಿಯುವ ನೀರು ತುಂಬಾ ಅವಶ್ಯಕವಾಗಿದು ಪ್ರತಿ ಮನೆ ಮನೆಗು .ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಾರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಯೋಜನೆಯು ಬಹಳ ವೇಗವಾಗಿ, ಸಮರ್ಪಕವಾಗಿ ಹಾಗೂ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣವಾಗಿರುವುದು ಬಹಳ ಸಂತೋಷಕರ ಸಂಗತಿ ಎಂದರು. ರಾಜ್ಯದ ಕಡು ಬಡವರಿಗೂ ಕೂಡ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು ಹಾಗೂ ಈ ಯೋಜನೆಯಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಬೇಕು ಎಂದರು. ರಾಜಕೀಯ ವ್ಯಕ್ತಿಗಳು ಪ್ರಜಾಪ್ರಭುತ್ವದ ನಿಯಮದಂತೆ ನಡೆದುಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಮಾಡಿಕೊಡಬೇಕು ಹಾಗೂ ಬಂಟ್ವಾಳ ತಾಲೂಕಿನಲ್ಲಿ ಇನ್ನಿತರ ಅಭಿವೃದ್ಧಿ ಕಾರ್ಯಗಳು ನೆರವೇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಕೇಂದ್ರ ಜಲ ಜೀವನ ಮಿಷನ್ ಯೋಜನೆಯಡಿ 2024 ರ ಒಳಗೆ ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೆ ನಳಗಳ ಮೂಲಕ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಯೋಜನೆಗೆ ಸಂಬಂದಿಸಿದಂತೆ, ಬಂಟ್ವಾಳ ವಿಧಾನ ಸಭಾಸಭಾ ಕ್ಷೇತ್ರಕ್ಕೆ ಗ್ರಾಮಗಳಿಗೆ ಅಂದಾಜು 33.72 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು, ಈ ಯೋಜನೆ ಅನುಷ್ಟಾನಗೊಳ್ಳಬೇಕಾಗಿದೆ ಎಂದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಮಂಜುಳಾ ಮಾಧವ ಮಾವೆ, ಜಿಪಂ ಸಿಇಒ ಡಾ.ಸೆಲ್ವಮಣಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ನರೇಂದ್ರಬಾಬು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಎಇಇ ತಾರಾನಾಥ ಸಾಲಿಯಾನ್ ವಂದಿಸಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸರಪಾಡಿ, ನರಿಕೊಂಬು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ"