ಬಂಟ್ವಾಳ: ವಿಧಾನಸಭೆ ಸಹಿತ ಚುನಾವಣೆಗಳ ಸಂದರ್ಭ ಪಕ್ಷದ ಅಭ್ಯರ್ಥಿಗಳನ್ನು ಮುಂಚಿತವಾಗಿಯೇ ಘೋಷಿಸಬೇಕು ಎಂಬ ಸಲಹೆ ಸಹಿತ ಹಲವು ವಿಚಾರಗಳು ಇಂದು ನಡೆದ ವಿಭಾಗೀಯ ಸಮಾವೇಶದಲ್ಲಿ ಚರ್ಚೆಗೊಳಪಟ್ಟಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬಂಟ್ವಾಳದಲ್ಲಿ ನಡೆದ ವಿಭಾಗೀಯ ಸಮಾವೇಶದ ವಿಚಾರಗಳನ್ನು ವಿವರಿಸಲು ಬುಧವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತನ ಧ್ವನಿ ಪಕ್ಷದ ಅಧ್ಯಕ್ಷರ ಧ್ವನಿಯಾಗಬೇಕು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿರುವ ಜನರ ಧ್ವನಿ ತಿಳಿದು ಜನಪರ ಹೋರಾಟ ರೂಪಿಸಬೇಕು. ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರ ಪಕ್ಷವನ್ನಾಗಿ ರೂಪಿಸಲು ತಳಮಟ್ಟದ ಸಂಘಟನೆಗೆ ಬೇಕಾದ ಸಲಹೆ ಸೂಚನೆ, ಲೋಪ ದೋಷಗಳ ಕುರಿತ ಮಾಹಿತಿ ಸಂಗ್ರಹವನ್ನು ಮಾಡಲಾಗಿದೆ. ಪ್ರತಿಯೊಂದು ಬೂತ್ ಗಳಲ್ಲಿ ಡಿಜಿಟಲ್ ಯೂತ್ ಎಂಬ ಪರಿಕಲ್ಪನೆಯಡಿ ಸಾಮಾಜಿಕ ಜಾಲತಾಣಗಳ ಸದ್ಬಳಕೆಯನ್ನು ಮಾಡಲಾಗುತ್ತದೆ. ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ಪುನರ್ರಚಿಸಲಾಗುತ್ತದೆ. ಪಕ್ಷದಲ್ಲಿ ನಿಷ್ಕ್ರಿಯರಾಗಿರುವವರನ್ನು ಸಕ್ರಿಯಗೊಳಿಸುವುದು, ದೂರ ಹೋದವರನ್ನು ಮತ್ತೆ ಪಕ್ಷಕ್ಕೆ ಕರೆತರುವುದರ ವಿಚಾರವಾಗಿ ಸಲಹೆಗಳು ಕಾರ್ಯರೂಪಕ್ಕೆ ಬರಲಿವೆ ಎಂದರು.
ವಿಧಾನಪರಿಷತ್ತು ವಿರೋಧ ಪಕ್ಷ ನಾಯಕ ಎಸ್.ಆರ್.ಪಾಟೀಲ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಪಕ್ಷ ಪ್ರಮುಖರಾದ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಮಿಥುನ್ ರೈ ಉಪಸ್ಥಿತರಿದ್ದರು.
Be the first to comment on "ಚುನಾವಣೆಗೆ ತಯಾರಿ, ಕಾರ್ಯಕರ್ತನ ಪಕ್ಷವನ್ನಾಗಿಸುವ ಸಂಕಲ್ಪ: ಸಮಾವೇಶದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್"