ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿಯ ನಿವಾಸಿ, ಗೊಂಬೆ ಕುಣಿತದ ಮೂಲಕ ಪ್ರಸಿದ್ಧರಾಗಿರುವ ಗೋಪಾಲಕೃಷ್ಣ ಬಂಗೇರ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಾಲ್ಯದಲ್ಲೇ ಸೈಕಲ್ ಬ್ಯಾಲೆನ್ಸ್ ಕಲಿತು ಕೇರಳದ ಕೆ.ಆರ್.ಮಣಿ ತಂಡದಲ್ಲಿ ಸೈಕಲ್ ಬ್ಯಾಲೆನ್ಸರ್ ಆಗಿ ಕಲಾ ಬದುಕು ಆರಂಭಿಸಿದ ಬಂಗೇರ, ಬಳಿಕ ಗೊಂಬೆ ಕುಣಿತಕ್ಕೆ ಆಕರ್ಷಿತರಾಗಿ ಬೆಳ್ತಂಗಡಿಯ ಶೆಟ್ಟಿ ಆರ್ಟ್ಸ್ ಗೊಂಬೆ ಬಳಗದಲ್ಲಿ ಕಲಾವಿದರಾಗಿ ಸೇರಿದರು. 8 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕಲ್ಲಡ್ಕ, ಶಿಲ್ಪಾ ಗೊಂಬೆ ಬಳಗಕ್ಕೆ ಸೇರಿ ಸುಮಾರು 25 ವರ್ಷಗಳ ಕಾಲ ಕೀಲು ಕುದುರೆಯ ರಾಜವೇಷಧಾರಿಯಾಗಿ ಜಾನಪದ ಕಲಾವಿದರಾಗಿ ಕಲಾಲೋಕದಲ್ಲಿ ಗಮನ ಸೆಳೆದಿದ್ದಾರೆ. ಮೈಸೂರು ದಸರಾ, ಹಂಪಿ ಉತ್ಸವ, ವಿಶ್ವ ತುಳು ಸಮ್ಮೇಳನ, ವಿಶ್ವನುಡಿಸಿರಿ, ವಿರಾಸತ್, ವಿಶ್ವ ಕನ್ನಡ ಸಮ್ಮೇಳನ, ವಿಶ್ವ ಕೊಂಕಣಿ ಸಮ್ಮೇಳನ, ಮುಂಬೈ, ಕೇರಳ ಪುಟಪರ್ತಿಯ ಸಮಾರಂಭ ಸಹಿತ ತಾಲೂಕು, ಜಿಲ್ಲೆ, ರಾಜ್ಯ, ಅಂತರ್‌ರಾಜ್ಯ ಮಟ್ಟ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಗೊಂಬೆ ಕುಣಿತದಲ್ಲಿ ಕೀಲು ಕುದುರೆಯ ರಾಜರಾಗಿ ಮಿಂಚಿದ್ದಾರೆ. ಸೈಕಲ್ ಬ್ಯಾಲೆನ್ಸರ್, ಸ್ತ್ರೀವೇಷ, ಪುರುಷ ವೇಷ, ರಾಜವೇಷ, ನೃತ್ಯಗಾರನಾಗಿ ಕಲಾಭಿಮಾನಿಗಳ ಮನಸೆಳೆದು ನಾಟಕಗಳಲ್ಲಿಯೂ ಅಭಿನಯಿಸಿರುವರು. ರಂಗ್, ಅಸಲ್, ನಿನ್ನೊಲಿಮೆಯಿಂದಲೇ, ಅಗ್ರಜ ಹೀಗೆ ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ದ.ಕ. ಜಿಲ್ಲಾ ರಾಜ್ಯೋತ್ಸವ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ರಜತ ವರ್ಷ ಪುರಸ್ಕಾರ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ರಜತ ಪುರಸ್ಕಾರ, ಮಧ್ವ ಶಾಲೆ ಶಿವಾಜಿ ಬಳಗ, ಬುಲೆಕ್ಕರ್ ಶಾರದಾ ಭಜನಾ ಮಂಡಳಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದಿಂದ ಪ್ರಶಸ್ತಿಗಳು ದೊರೆತಿವೆ.
Be the first to comment on "ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿಗೆ ದ.ಕ.ಜಿಲ್ಲೆಯಿಂದ ಗೊಂಬೆ ಕುಣಿತದ ಗೋಪಾಲಕೃಷ್ಣ ಬಂಗೇರ ಆಯ್ಕೆ"