





ಬಂಟ್ವಾಳ : ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ಮಕ್ಕಳು ಭಾಗವಹಿಸಲು ಮತ್ತು ಕಲಾವಿದರನ್ನು ಬೆಳೆಸುವ ಮೂಲಕ ಯಕ್ಷಗಾನದ ಬೆಳವಣಿಗೆಗೆ ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ, ಪರಿಶ್ರಮ ಅಭಿನಂದನೀಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ, ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲಗುತ್ತು ಅವರು ಹೇಳಿದರು.
ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕದ ತೃತೀಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಮಹಾಮಾರಿಯಿಂದ ಕಲಾವಿದರ ಬದುಕು ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಚಿಕ್ಕಮಗಳೂರು,ಶಿವಮೊಗ್ಗ ಸಹಿತ ಆರು ತಾಲೂಕಿನ ೧,೩೦೦ ಕುಟುಂಬಕ್ಕೆ ಒಂದು ತಿಂಗಳಿನ ಕಿಟ್ ಅನ್ನು ಟ್ರಸ್ಟ್ ಮನೆ ಮನೆಗೆ ವಿತರಿಸಲಾಗಿದೆ. ಎಂದು ಹೇಳಿದ ಅವರು ಕೋವಿಡ್ ಸಮಯದಲ್ಲಿ ಸಹಕರಿಸಿದ ಆರೋಗ್ಯ,ಪೊಲೀಸ್ ಇಲಾಖೆಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ಪುಂಜಾಲಕಟ್ಟೆ ಪೊಲೀಸ್ ಠಾಣಾಽಕಾರಿ ಸೌಮ್ಯಾ ಜೆ. ಅವರು ಮಾತನಾಡಿ, ಯಕ್ಷ ಕಲಾವಿದರಿಗೆ ಭರವಸೆಯ ಬೆಳಕು ನೀಡಿ ಮುನ್ನಡೆಸುವ ಕಾರ್ಯ ಮಾಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಾದರಿ ಸಂಘಟನೆಯಾಗಿದೆ. ಸಂಸ್ಕಾರಯತ ಜೀವನಕ್ಕೆ ಯಕ್ಷಗಾನ ಸಂಪರ್ಕ ಸಾಧನವಾಗಿದೆ ಎಂದರು.
ಪಿಲಾತಬೆಟ್ಟು ವ್ಯ.ಸೇ. ಸಂಘದ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ ಉಡುಪ ಅವರು ಮಾತನಾಡಿ, ಕಲಾವಿದರ ಸಾಮಾಜಿಕ ಸ್ಥಾನಮಾನ, ಸೌಕರ್ಯಗಳ ಕುರಿತು ಕಾಳಜಿ ವಹಿಸುವ ಕಾರ್ಯ ಯಕ್ಷಧ್ರುವ ಟ್ರಸ್ಟ್ ಮಾಡುತ್ತಿದೆ. ಇಂತಹ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಘಟಕ ಸಹ ಸಂಚಾಲಕ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನದ ಕಲಾವಿದರಿಗೆ ಚೈತನ್ಯ ನೀಡುವ ಕಾರ್ಯವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನಡೆಸುತ್ತಿದೆ, ಈಗಾಗಲೆ ೩೫ ಘಟಕಗಳು ರಚನೆಯಾಗಿದ್ದು, ನಾಲ್ಕೂವರೆ ವರ್ಷದಲ್ಲಿ ಸುಮಾರು ೫ ಕೋಟಿ ರೂ. ಮೊತ್ತದ ಸೇವಾ ಯೋಜನೆಗಳನ್ನು ವಿತರಿಸಲಾಗಿದೆ ಎಂದರು.
ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ. ತುಂಗಪ್ಪ ಬಂಗೇರ,ಉದ್ಯಮಿ ಜಯರಾಮ ಶೆಟ್ಟಿ ಕಾಪು, ಪಿಲಾತಬೆಟ್ಟು ಗ್ರಾ.ಪಂ. ಪಿಡಿಒ ರಾಜಶೇಖರ ರೈ, ಅಜ್ಜಿಬೆಟ್ಟು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಪ್ರಗತಿಪರ ಕೃಷಿಕ ಶೈಲೇಶ್ ಪುಳಿಮಜಲು, ಶ್ರೀ ಶಾರಾದಾಂಬಾ ಯುವಕ ಮಂಡಲ ಅಧ್ಯಕ್ಷ ರೋಹಿತ್ ಕುಮಾರ್, ಘಟಕ ಗೌರವಾಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಅಧ್ಯಕ್ಷ ಪುರುಷೋತ್ತಮ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ತುಳಸಿ ಹಾರಬೆ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಹಿರಿಯ ಅರ್ಥದಾರಿ ಉಮೇಶ್ ಪೂಜಾರಿ ಬುಳೆಕ್ಕಿನಕೋಡಿ, ಪುಂಜಾಲಕಟ್ಟೆ ಘಟಕದ ನಾಟ್ಯ ಗುರು ದಿನೇಶ್ ಶೆಟ್ಟಿ ಕಾವಳಕಟ್ಟೆ, ದೇವಿಪ್ರಸಾದ್ ಆಚಾರ್ಯ ಮತ್ತು ತರಗತಿ ಜವಾಬ್ದಾರಿ ನಿರ್ವಹಿಸಿದ ಬೇಬಿ ರೇಖಾ ಶೆಟ್ಟಿ, ಅನ್ನದಾನ ಸೇವಾಕರ್ತೃ ಗಂಗಯ್ಯ ಮೂಲ್ಯ ದಂಪತಿ ಅವರನ್ನು ಸಮ್ಮಾನಿಸಲಾಯಿತು.
ಶಿಕ್ಷಕ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಪಿ.ಎಂ. ಪ್ರಭಾಕರ ಸಮ್ಮಾನಿತರನ್ನು ಪರಿಚಯಿಸಿದರು. ಮಹಿಳಾ ಘಟಕ ಸಂಚಾಲಕಿ ಶೋಭಾ ವಿಜಯ್ ವಂದಿಸಿದರು. ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮುನ್ನ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ, ಬಳಿಕ ಪಾವಂಜೆ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಇನ್ನಷ್ಟು ಚಿತ್ರಗಳು ಇಲ್ಲಿವೆ.
Be the first to comment on "ಯಕ್ಷಧ್ರುವ ಪಟ್ಲ ಫೌಂಡೇಶನ್ : ಪುಂಜಾಲಕಟ್ಟೆ ಘಟಕ ವಾರ್ಷಿಕೋತ್ಸವ"