ಬಂಟ್ವಾಳ: ನ್ಯಾನೊ ರಸಗೊಬ್ಬರ ವಿತರಣೆ ಆರಂಭವಾದರೆ ದೇಶದ ಕೃಷಿ ಉತ್ಪಾದನೆಯೂ ಜಾಸ್ತಿಯಾಗಬಹುದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿ. ಬೆಂಗಳೂರು, ಸದಾಸ್ಮಿತ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ಶನಿವಾರ ಸಂಜೆ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು.
ಕೊರೊನಾ ವೇಳೆ ಸಕ್ರಿಯವಾಗಿದ್ದ ಕೃಷಿ ಕ್ಷೇತ್ರಕ್ಕೆ ರಸಗೊಬ್ಬರ ಎಂದಿಗಿಂತ ಶೇ.36.2 ಜಾಸ್ತಿ ಮಾರಾಟವಾಗಿದ್ದು, ನೇರವಾಗಿ ರೈತರ ಅಕೌಂಟ್ ಗೆ ಸಹಾಯಧನವನ್ನೂ ಪಾವತಿಸಲಾಗಿದೆ. ಇದರಲ್ಲಿ ಇಫ್ಕೊ ಪಾತ್ರ ಪ್ರಧಾನವಾದದ್ದು ಎಂದವರು ಹೇಳಿದರು.
ಶ್ರೀರಾಮ ವಿದ್ಯಾ ಕೇಂದ್ರದ ಎಲ್ಲ ವಿಭಾಗಗಳ ಡಿಟಿಜಲೀಕರಣಕ್ಕೆ ಅಗತ್ಯ ನೆರವು ನೀಡಲು ಬದ್ಧವಾಗಿದೆ. ಶ್ರೀರಾಮ ವಿದ್ಯಾಕೇಂದ್ರದ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ವಿತರಣೆಗೆ ಇಪ್ಕೋ ಹಾಗೂ ಸದಾಸ್ಮಿತ ಫೌಂಡೇಷನ್ ಮೂಲಕ ಯೋಜನೆ ರೂಪಿಸುವುದಾಗಿ ತಿಳಿಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಇಪ್ಕೋ ನಿರ್ದೇಶಕರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಲ್ಯಾಪ್ ಟಾಪ್ ಪಡೆದುಕೊಂಡ ವಿದ್ಯಾರ್ಥಿಗಳು ಮುಂದೆ ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವಾಗುವಮತಾಗಬೇಕು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾಗಿ ವಿದ್ಯಾರ್ಥಿಗಳ ಶಿಕ್ಷಣದಲ್ಲೂ ಬದಲಾವಣೆಯಾಗಿದೆ ಎಂದರು.
ಕೋಲಾರ ಶಾಸಕ, ಇಪ್ಕೋ ನಿರ್ದೇಶಕ ಕೆ. ಶ್ರೀನಿವಾಸ ಗೌಡ, ಬೆಂಗಳೂರಿನ ಸದಾಸ್ಮಿತ ಫೌಂಡೇಶನ್‍ನ ಅಧ್ಯಕ್ಷ ಡಾ. ಶಿವರಾಮ್, ಕಾರ್ಯದರ್ಶಿ ಅನಿತಾ ಮಂಜುನಾಥ, ಇಪ್ಕೋ ಮಂಗಳೂರು ಕ್ಷೇತ್ರಾಧಿಕಾರಿ ಸಂಗಮೇಶ್ ಎಂ.ಬಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಪ್ಕೋದ ಕರ್ನಾಟಕ ರಾಜ್ಯ ಮಾರಾಟ ವ್ಯವಸ್ಥಾಪಕರಾದ ಡಾ. ಸಿ.ನಾರಾಯಣ ಸ್ವಾಮಿ ಪ್ರಸ್ತಾವನೆಗೈದರು. ಈ ಸಂದರ್ಭ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಪದವಿ ವಿಭಾಗದ ಪ್ರಿನ್ಸಿಪಾಲ್ ಕೃಷ್ಣಪ್ರಸಾದ ಕಾಯರಕಟ್ಟೆ ಸ್ವಾಗತಿಸಿದರು. ಉಪನ್ಯಾಸಕಿ ವಿದ್ಯಾಶ್ರೀ ವಂದಿಸಿದರು. ಕವಿತಾಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ನ್ಯಾನೊ ರಸಗೊಬ್ಬರ ವಿತರಣೆ ಆರಂಭಗೊಂಡರೆ ಕೃಷಿಯುತ್ಪಾದನೆಯೂ ಅಧಿಕ ಸಾಧ್ಯತೆ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ"