ತೀವ್ರ ಕುತೂಹಲ ಕೆರಳಿಸಿರುವ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿ ಶನಿವಾರ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಸಲು ಬೆಳಗ್ಗೆ 10.30ಕ್ಕೆ ಕೊನೆಯ ಅವಧಿಯಾಗಿದ್ದು, ಈ ಹೊತ್ತಿಗೆ ಬಿಜೆಪಿಯಿಂದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಎಸ್.ಡಿ.ಪಿ.ಐ. ನಿಂದ ಮುನೀಶ್ ಆಲಿ ಹಾಗೂ ಕಾಂಗ್ರೆಸ್ ನಿಂದ ಮಹಮ್ಮದ್ ಶರೀಫ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೀನಾಕ್ಷಿ ಗೌಡ ಮತ್ತು ಕಾಂಗ್ರೆಸ್ ನಿಂದ ಜೆಸಿಂತಾ ಡಿಸೋಜ ನಾಮಪತ್ರ ಸಲ್ಲಿಸಿದ್ದಾರೆ.
12.30ರಿಂದ ನಾಮಪತ್ರ ಪರಿಶೀಲನೆ ಕಾರ್ಯ ನಡೆಯುವುದು. ಅದಾದ ಬಳಿಕ ಹಿಂಪಡೆಯಲು ಅವಕಾಶವಿದೆ. ಕ್ರಮಬದ್ಧ ನಾಮಪತ್ರ ಇರುವವರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅವಿರೋಧ ಆಯ್ಕೆಯಾಗದೇ ಇದ್ದರೆ, ಸ್ಪರ್ಧೆಯು ಪೌರಸಭೆಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ 1965ರ ಪ್ರಕಾರ ನಡೆಯುತ್ತದೆ. ಲೋಕಸಭಾ ಸದಸ್ಯರು ಮತ್ತು ಸ್ಥಳೀಯ ಶಾಸಕರು ಚುನಾಯಿತ ಸದಸ್ಯರೊಂದಿಗೆ ಮತದಾನ ಮಾಡಲು ಅರ್ಹರು.
ಯಾರಿಗೆ ಚಾನ್ಸ್: 2018, ಆಗಸ್ಟ್ 31ರಂದು ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರಕಿತ್ತು. 27 ಸ್ಥಾನಗಳ ಪೈಕಿ, ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗೆದ್ದಿದ್ದವು. ಸಂಸದ, ಶಾಸಕರ ಮತಬಲದಿಂದ ಬಿಜೆಪಿಗೆ 13 ಸಂಖ್ಯಾಬಲ ದೊರಕುತ್ತದೆ.
ಎಲ್ಲ ಚುನಾಯಿತ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಆಯಾ ಪಕ್ಷದಿಂದ ಆಯ್ಕೆಯಾದವರು ಅವರದ್ದೇ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿದರೆ, ಎಲ್ಲ ಮೂರು ಅಭ್ಯರ್ಥಿಗಳು ನಾಮಪತ್ರವನ್ನು ಹಿಂದೆಗೆಯದೇ ಇದ್ದರೆ, ಸಹಜವಾಗಿಯೇ ಬಿಜೆಪಿಗೆ 13, ಕಾಂಗ್ರೆಸ್ 12, ಎಸ್.ಡಿ.ಪಿ.ಐ.ಗೆ 4 ಮತಗಳು ಬರಬಹುದು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಡಿ.ಪಿ.ಐ. ನಿರ್ಣಾಯಕ ಪಾತ್ರ ವಹಿಸುತ್ತದೆ.
ಇದೀಗ ಎಲ್ಲರ ಕುತೂಹಲ ಯಾರು ನಾಮಪತ್ರ ಹಿಂತೆಗೆಯುತ್ತಾರೆ ಮತ್ತು ಯಾರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಅಥವಾ ತಟಸ್ಥವಾಗಿ ಉಳಿಯುತ್ತಾರೆ ಎಂದಿದೆ.
Be the first to comment on "BREAKING: ಬಂಟ್ವಾಳ ಪುರಸಭೆ: ಎಲ್ಲ ಮೂರು ಪಕ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ"