ಸಿದ್ದಕಟ್ಟೆ: ಓದುಗರಿಲ್ಲ ಎಂಬ ಬೀಸು ಹೇಳಿಕೆ ಸಲ್ಲದು. ಓದುಗರಿಗೆ ಪುಸ್ತಕ ತಲುಪುವ ಕಾರ್ಯವಾಗಬೇಕು ಎಂದು ನಿವೃತ್ತ ಉಪನ್ಯಾಸಕ ಹಾಗೂ ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಹೇಳಿದರು.
ಸಿದ್ದಕಟ್ಟೆಯ ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ ಇದರ ವತಿಯಿಂದ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆದ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಡಾ. ಯೋಗೀಶ ಕೈರೋಡಿ ಅವರ ಸಂತೆಯಲ್ಲಿ ಅಕ್ಷರದ ಆನಂದ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿವೇಚನ, ಕೃತಿವಿಚಾರ ಹಾಗೂ ವ್ಯಕ್ತಿ ವೈಶಿಷ್ಠ ಎಂಬ ಮೂರು ಭಾಗಗಳಲ್ಲಿ ಮೂಡಿ ಬಂದ ಡಾ. ಕೈರೋಡಿಯವರ ಬರಹಗಳು ಸಂಕೀರ್ಣ ವಿಷಯ ಮತ್ತು ಸರಳ ನಿರೂಪಣೆಯ ಮೂಲಕ ಮಹತ್ವಪೂರ್ಣವಾದುದು ಎಂದು ಅವರು ಹೇಳಿದರು.
ಇದೇ ವೇಳೆ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿ ಸಿದ್ದಕಟ್ಟೆ ಅವರಿಗೆ ಯಕ್ಷಮಿತ್ರ ಸಿದ್ಧಕಟ್ಟೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಸದಾಶಿವ ಶೆಟ್ಟಿ ಅವರು ಮಾತನಾಡಿ, ಹುಟ್ಟೂರ ಪ್ರಶಸ್ತಿ ಅಮೂಲ್ಯವಾದುದು, ಪ್ರಶಸ್ತಿ ಕಲಾವಿದನ ಚೈತನ್ಯವನ್ನು ಹೆಚ್ಚಿಸುತ್ತದೆ. ಕಲಾ ಸೇವೆಗೆ ಪ್ರೇರಣೆಯಾಗಿದೆ ಎಂದರು.
ಶ್ರೀ ಕ್ಷೇತ್ರ ಪೂಂಜದ ಪ್ರ. ಅರ್ಚಕ ಪ್ರಕಾಶ್ ಆಚಾರ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ , ಕಲಾ ಪೋಷಕ ಸುಬ್ರಹ್ಮಣ್ಯ ಭಟ್, ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮರಾಜ ಬಲ್ಲಾಳ್, ತಾ.ಪಂ. ಮಾಜಿ ಸದಸ್ಯ ರತ್ನ ಕುಮಾರ್ ಚೌಟ, ಸಂಚಾಲಕ ಹರಿಪ್ರಸಾಸ್ ಶೆಟ್ಟಿ ಕುರುಡಾಡಿ, ಪೂವಳ ಶ್ರೀ ರಾಮಾಂಜನೇಯ ಕ್ಷೇತ್ರದ ಧರ್ಣಪ್ಪ ಶೆಟ್ಟಿ ಪೂವಳ, ಉದ್ಯಮಿ ಕಿರಣ್ ಕುಮಾರ್ ಮಂಜಿಲ ಉಪಸ್ಥಿತರಿದ್ದರು.
ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿದರು. ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಶೆಟ್ಟಿ ಪಾಲ್ಯ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಬಳಿಕ ಭಕ್ತ ಮಯೂರ ಧ್ವಜ ತಾಳಮದ್ದಳೆ ನಡೆಯಿತು.
Be the first to comment on "ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ : ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ"