ಬಂಟ್ವಾಳ: ಯಾರಿಗೆಲ್ಲ ಹಕ್ಕುಪತ್ರ ಕೊಟ್ಟಿದ್ದಾರೆ ಗ್ರಾಪಂ ತಕ್ಷಣ ಖಾತಾ ಮಾಡಿ ಕೊಡಬೇಕು, ಗ್ರಾಮೀಣ ಪ್ರದೇಶದ ಜನರನ್ನು ಕಚೇರಿಗಳಲ್ಲಿ ಸತಾಯಿಸಬಾರದು, ವಿಳಂಬ ಧೋರಣೆ ಅನುಸರಿಸಿದರೆ ಗಮನಕ್ಕೆ ತನ್ನಿ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನ ಗ್ರಾಮಗಳ 94ಸಿ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೋಮವಾರ ಸಂಜೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ ಉಪಸ್ಥಿತಿಯಲ್ಲಿ ಸೌಲಭ್ಯ ವಿತರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಂಟ್ವಾಳ ತಾಲೂಕಿನ ಭಾಗದಲ್ಲಿ 94ಸಿಗೆ ಮೂರುವರೆ ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಸುಮಾರು ಎರಡೂವರೆ ಸಾವಿರ ಹಕ್ಕುಪತ್ರ ಕೊಡುವ ಬೇಡಿಕೆ ಈಡೇರಿಸಿದ್ದೇವೆ. ಒಂದು ಸಾವಿರದಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಈ ಕುರಿತು ಎಸಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬಿಪಿಎಲ್ ಕಾರ್ಡುಗಳ ಅರ್ಜಿ ಸ್ವೀಕಾರ ಗ್ರಾಮೀಣ ಮಟ್ಟದಲ್ಲಿ ಇನ್ನೂ ಆರಂಭಿಸಿಲ್ಲ. ಆನ್ಲೈನ್ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು. ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಸರ್ಕಾರ ಬಡವರ ಆಹಾರ ಹಕ್ಕನ್ನು ಕಸಿಯದೆ ನ್ಯಾಯ ಒದಗಿಸಬೇಕು ಎಂದು ಖಾಧರ್ ಹೇಳಿದರು.
ತುಂಬೆಯಿಂದ ಸಜೀಪಕ್ಕೆ ಸಂಪರ್ಕ ಸೇತುವೆ ನಿರ್ಮಾಣ ಸರ್ಕಾರದ ಮಂಜೂರಾತಿ ಹಂತದಲ್ಲಿದೆ ಎಂದು ಹೇಳಿದ ಖಾದರ್, ಈಗಾಗಲೇ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಆಗುತ್ತಿದೆ. ಫಜೀರು ಕಂಬಳಪದವು ಸಂಪರ್ಕ ರಸ್ತೆ ಸಹಿತ ಎಲ್ಲ ರಸ್ತೆಗಳ ಕಾಮಗಾರಿ ಆರಂಭಗೊಂಡಿದೆ. ಚೇಳೂರಿಂದ ಚಟ್ಟೆಕಲ್ಲು ಮೂಲಕ ಇರಾ ಕುಂಡಾವು ಸಂಪರ್ಕ ರಸ್ತೆ 7.5 ಕೋಟಿ ರೂ ವೆಚ್ಚದಲ್ಲಿ ಶಂಕುಸ್ಥಾಪನೆ ಆಗಿದೆ. ಗ್ರಾಮೀಣ ಸಂಪರ್ಕ ರಸ್ತೆ ನಿರ್ಮಾಣ ನಡೆಯುತ್ತಿದೆ ಎಂದು ಹೇಳಿದರು. ಕುಡಿಯುವ ನೀರು ಒದಗಿಸಲು ಸಜೀಪಮುನ್ನೂರು ಗ್ರಾಮದ ನೇತ್ರಾವತಿ ಕಿನಾರೆಯಲ್ಲಿ ಜಾಕ್ ವೆಲ್ ಆಗುತ್ತಿದ್ದು, ಇದರ ಮೂಲಕ ಜನರಿಗೆ ನೀರೊದಗಿಸಲಾಗುತ್ತದೆ ಎಂದರು.
ಉಳ್ಳಾಲ ತಾಲೂಕಿನ ವ್ಯಾಪ್ತಿಗೆ ಬಂಟ್ವಾಳ ತಾಲೂಕಿನ ಭಾಗಗಳ ಸೇರ್ಪಡೆ ಕುರಿತ ವಿಚಾರಕ್ಕೆ ಉತ್ತರಿಸಿದ ಖಾದರ್, ತುಂಬೆ, ಮೇರೆಮಜಲು, ಪುದು ಕೊಡ್ಮಣ್ ಹೊರತುಪಡಿ, ಇತರ ಭಾಗಗಳ ಸೇರ್ಪಡೆಯಾಗಲಿದೆ ಎಂದರು. ತಾತ್ಕಾಲಿಕವಾಗಿ ನಾಟೆಕಲ್ ಉಳ್ಳಾಲ ತಾಲೂಕು ಕೇಂದ್ರ ಕಾರ್ಯಾಚರಣೆ ನಡೆಯಲಿದೆ ಎಂದರು. ಈ ಸಂದರ್ಭ ಯು.ಟಿ.ಖಾದರ್ ಅವರ ಹುಟ್ಟುಹಬ್ಬಕ್ಕೆ ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಇರಾ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುರ್ ರಝಾಕ್ ಕುಕ್ಕಾಜೆ, ಪುದು ಪಂಚಾಯಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪ್ರಮುಖರಾದ ಮುರಳೀಧರ ಶೆಟ್ಟಿ ನರಿಂಗಾನ, ಇಕ್ಬಾಲ್, ಶಮೀರ್ ಫಜೀರ್, ಮಜೀದ್ ಫರಂಗಿಪೇಟೆ ವೃಂದಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಮಾರು 17 ಮಂದಿಗೆ ಹಕ್ಕುಪತ್ರ ಹಾಗೂ 12 ಮಂದಿಗೆ ಒಟ್ಟು 3.82 ಲಕ್ಷ.ರೂ.ಪ್ರಾಕೃತಿಕ ವಿಕೋಪದಡಿ ಪರಿಹಾರ ಚೆಕ್ ವಿತರಿಸಲಾಯಿತು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ನಿರ್ವಹಿಸಿದರು.
Be the first to comment on "ಗ್ರಾಪಂಗಳಲ್ಲಿ ಜನರ ಕೆಲಸ ವಿಳಂಬವಾದರೆ ಗಮನಕ್ಕೆ ತನ್ನಿ – 94ಸಿ ಹಕ್ಕುಪತ್ರ ವಿತರಿಸಿ ಯು.ಟಿ.ಖಾದರ್"