ಯಕ್ಷಗಾನ ಕಲಾವಿದರು ವೃತ್ತಿಯನ್ನು ಕಳೆದುಕೊಳ್ಳಬಾರದು. ಎಲ್ಲ ರೀತಿಯ ಸೂಕ್ತ ಮುಂಜಾಗರೂಕತಾ ಕ್ರಮದೊಂದಿಗೆ ಸಂಪ್ರದಾಯದ ಪ್ರಕಾರ ಕರಾವಳಿಯ ಗಂಡುಕಲೆ ಯಕ್ಷಗಾನ ಜಿಲ್ಲೆಯಾದ್ಯಂತ ನವೆಂಬರ್ ಅಂತ್ಯಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳವಾರ ಮಂಗಳೂರಿನಲ್ಲಿರುವ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಯಕ್ಷಗಾನ ಮೇಳಗಳ ಸಂಚಾಲಕರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಕೋವಿಡ್–19 ನಿಂದಾಗಿ ಯಕ್ಷಗಾನ ಕಲಾವಿದರ ಸ್ಥಿತಿ ಸಂಕಷ್ಟದಲ್ಲಿ ಸಿಲುಕಿದ್ದು, ಯಾವುದೇ ಕಲಾವಿದನಿಗೆ ಅನ್ಯಾಯವಾಗದಂತೆ ಶೀಘ್ರದಲ್ಲಿಯೇ ಸರಕಾರದಿಂದ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20 ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು, ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ. ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಬಯಲಾಟ ಆರಂಭವಾಗಲಿದ್ದು, ಕಲಾವಿದರ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆದ್ಯ ಕರ್ತವ್ಯವಾಗಿರುವುದರಿಂದ ಸರಕಾರದ ಮಾರ್ಗಸೂಚಿಯಂತೆ ಆರೋಗ್ಯ ಇಲಾಖೆಯ ವತಿಯಿಂದ ಯಕ್ಷಗಾನ ಕಲಾವಿದರು ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಕೊರೋನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ಯಕ್ಷಗಾನ ಮೇಳಗಳಲ್ಲಿಯೂ ಸಹ ವಾರಕ್ಕೆ ಒಂದು ಬಾರಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕೆಂದರು.
ಎಲ್ಲಾ ಕಲಾವಿದರು ಹೊಸ ಹುಮ್ಮಸ್ಸಿನಿಂದ ಮಾನಸಿಕ ಮತ್ತು ದೈಹಿಕವಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಯಾವ ಕಲಾವಿದರು ಕೆಲಸವಿಲ್ಲದೆ ಕೂರಬಾರದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯವರು ಜಂಟಿಯಾಗಿ ಯಕ್ಷಗಾನ ಅಕಾಡೆಮಿಯಿಂದ ಕಲಾವಿದರ ಮಾಹಿತಿ ಪಡೆದುಕೊಂಡು, ಕಲಾವಿದರ ದಾಖಲೀಕರಣ ಮಾಡಿ ಎಂದು ಸೂಚಿಸಿದ ಅವರು ಯಕ್ಷಗಾನ ಬಯಲಾಟ ಪ್ರದರ್ಶನಕ್ಕೆ (ಬುಕ್ಕಿಂಗ್, ಖಾಯ್ದಿರಿಸುವಿಕೆ) ಈ ಬಾರಿ ಮೇಳಗಳು ಮುಂಗಡ ಬುಕ್ಕಿಂಗ್ ಆಗದೇ ಕಲಾವಿದರು ತೀವ್ರ ಸಂಕಷ್ಟದಲ್ಲಿದ್ದಾರೆ ಅವರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಬಯಲು ಪ್ರದೇಶಗಳಲ್ಲಿ ಯಕ್ಷಗಾನ ಪ್ರಾರಂಭಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಕಡ್ಡಾಯವಾಗಿ 200 ಜನ ಮೀರದಂತೆ ಕ್ರಮವಹಿಸಬೇಕು. ಆ ಪ್ರದೇಶದ ಸುತ್ತಮುತ್ತ ಸ್ಯಾನಿಟೈಸರ್ ಮಾಡಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮುಖಗವಸು ಹಾಕುವಂತೆ ಸಂಬಂಧಪಟ್ಟವರು ಕ್ರಮವಹಿಸಬೇಕು ಎಂದರು.
ಕಟೀಲು ದೇವಳದ ಆಡಳಿತ ಮೊಕ್ತೇಸರ ಶ್ರೀ ಹರಿ ಅಸ್ರಣ್ಣ ಮಾತನಾಡಿ, ಕಟೀಲಿನ ಆರು ಮೇಳಗಳು ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಹೊರಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಬಪ್ಪನಾಡು, ಸಸಿಹಿತ್ಲು ಮೇಳಗಳ ಸಹಿತ ಅನೇಕರು ಕೊರೋನಾದ ಸಂದರ್ಭದಲ್ಲಿ ಕಲಾವಿದರು ಮತ್ತು ವೃತ್ತಿಪರ ಮೇಲಗಳ ಸಮಸ್ಯೆಗಳನ್ನು ವಿವರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಯಕ್ಷಗಾನದ ತಂಡದ ಉಜಿರೆ ಅಶೋಕ್ ಭಟ್ ಮಾತನಾಡಿ, ಪತ್ರಿ ವರ್ಷ ಯಕ್ಷಗಾನ ಪ್ರದರ್ಶನಗಳು ಮೇ ತಿಂಗಳಿನಲ್ಲಿ ಆರಂಭವಾಗುತ್ತದೆ, ಆದರೆ ಈ ವರ್ಷ ಕೊರೊನಾ ವೈರಸ್‍ನಿಂದಾಗಿ ಮುಂಗಡವಾಗಿ ಖಾಯ್ದಿರಿಸಿದ್ದ ಹಲವು ಯಕ್ಷಗಾನ ಪ್ರದರ್ಶನಗಳು ರದ್ದಾಗಿದೆ. ಹರಕೆಯ ಯಕ್ಷಗಾನ ಆಟ ಬಿಟ್ಟರೆ ಮತ್ತೆ ಬೇರೆ ಯಾವುದೇ ಯಕ್ಷಗಾನ ಪ್ರದರ್ಶನಗಳೂ ಈ ಬಾರಿ ಇಲ್ಲದಿರುವುದು ಬಹು ದೊಡ್ಡ ಸವಾಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್, ಕಲಾವಿದರ ಪರವಾಗಿ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸೀತಾರಾಮ್ ಕಟೀಲ್ ಹಾಗೂ ಯಕ್ಷಗಾನ ತಂಡಗಳ ಸಂಚಾಲಕರು ಹಾಗೂ ಕಲಾವಿದರು ಉಪಸ್ಥಿತರಿದ್ದರು.
Be the first to comment on "ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಪ್ರದರ್ಶನ ಆರಂಭ – ಕೋಟ ಶ್ರೀನಿವಾಸ ಪೂಜಾರಿ"