ಹಿರಿಯ ಸಾಹಿತಿ, ಕಾರಂತರ ನಿಕಟವರ್ತಿ 89 ವರ್ಷದ ಬಂಟ್ವಾಳ ತಾಲೂಕಿನ ಪಡಾರು ಮಹಾಬಲೇಶ್ವರ ಭಟ್ ಮಂಚಿ ಅವರಿಗೆ ಡಾ. ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ನೀಡುವ ಕಾರಂತ ಪ್ರಶಸ್ತಿ 2020 ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.
ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅ,10ರಂದು ಮಂಗಳೂರಿನಲ್ಲಿ ಜರಗುವ ಕಾರಂತ ಹುಟ್ಟುಹಬ್ಬ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ
ಸಹಜ ಶೈಲಿಯ ಹಿರಿಯ ಸಾಹಿತಿ, ಬಂಟ್ವಾಳ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಅತ್ಯುತ್ತಮ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ ಸದ್ದುಗದ್ದಲವಿಲ್ಲದ ಅಪ್ಪಟ ಸಾಹಿತಿ, ಇವರಾಗಿದ್ದಾರೆ. ಹಲವಾರು ಸನ್ಮಾನಗಳು ಇವರನ್ನು ಅರಸಿಕೊಂಡು ಬಂದಿವೆ. ಕಾರಂತರ ನಿಕಟವರ್ತಿಗಳಾಗಿದ್ದು ಇವರ ಸ್ವಗೃಹದಲ್ಲೇ ಹಲವಾರು ಬಾರಿ ಕೆಲವು ದಿವಸಗಳವರೆಗೆ ಕಾರಂತರು ಉಳಿದುಕೊಂಡು ಪ್ರಶಾಂತ ವಾತಾವರಣದಲ್ಲಿ ಕಾದಂಬರಿ ಬರೆಯುತ್ತಿದ್ದರು. ಚೋಮನ ದುಡಿ ಚಲನ ಚಿತ್ರದಚಿತ್ರೀಕರಣ ಇವರ ಮನೆಯ ಪರಿಸದಲ್ಲೇ ನಡೆದಿತ್ತು ಎಂಬುದು ಈಗ ಇತಿಹಾಸ. ತುಳು ಭಾಷಾಜ್ಞಾನಿಗಳಾಗಿದ್ದು ಕಾರಂತರಿಗೆ ತುಳು ಭಾಷೆಯ ಬಗ್ಗೆ ಅಗತ್ಯದ ಮಾಹಿತಿ ನೀಡುತ್ತಿದ್ದರು. ಹೆಸರು, ಪ್ರಚಾರ, ಪ್ರಶಸ್ತಿ, ಪ್ರತಿಷ್ಠೆಗಳಿಂದ ದೂರ ಉಳಿದ ಇವರ ನಿಸ್ವಾರ್ಥ ಸಾಹಿತ್ಯ ಸೇವೆಯನ್ನು ಹಲವಾರು ಗಣ್ಯ ಸಾಹಿತಿಗಳು ಗುರುತಿಸಿ ಶ್ಲಾಘಿಸಿರುತ್ತಾರೆ.
Be the first to comment on "ಪಡಾರು ಮಹಾಬಲೇಶ್ವರ ಭಟ್ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ, ಅ.10ರಂದು ಮಂಗಳೂರಲ್ಲಿ ಪ್ರದಾನ"