ಬಂಟ್ವಾಳ: ನೂತನವಾಗಿ ಮಂಜೂರುಗೊಂಡಿರುವ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲಾ ವಿಭಾಗವನ್ನು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಮಂಗಳವಾರ ಬೆಳಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಈ ಶಾಲೆಯನ್ನು ದತ್ತು ತೆಗೆದುಕೊಂಡ ಬಳಿಕ ಹಳ್ಳಿ ಪ್ರದೇಶವಾದ ದಡ್ಡಲಕಾಡಿನಲ್ಲಿ ಉತ್ಕೃಷ್ಟ ದರ್ಜೆಯ ಸೌಕರ್ಯಗಳನ್ನು ಒದಗಿಸುವ ಮೂಲಕ ದೇಶವೇ ಗಮನ ಸೆಳೆಯುವ ಕಾರ್ಯವನ್ನು ಮಾಡುತ್ತಿದೆ ಎಂದು ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ಶಾಲಾ ದತ್ತು ಸಂಸ್ಥೆ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಸಭಾಂಗಣ ಹಾಗೂ ಅಕ್ಷರ ದಾಸೋಹ ಕಟ್ಟಡಕ್ಕೆ ಸರಕಾರದಿಂದ ಅನುದಾನ ಒದಗಿಸುವಂತೆ ವಿನಂತಿಸಿದರು.
ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಡ್ಡಲಕಾಡು ಶಾಲೆಗೆ ಎರಡು ಹಾಗೂ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಶಾಲೆಗೆ ಒಂದು ಬಸ್ಸನ್ನು ಕೊಡುಗೆಯಾಗಿ ನೀಡಲಾಯಿತು. ಬಸ್ಸಿನ ಕೀಲಿಕೈಯನ್ನು ಶಾಸಕರು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ಶಾಲೆ ನೂತನ ಸಭಾಂಗಣದ ಉಳಿದ ಕಾಮಗಾರಿ ಹಾಗೂ ಅಕ್ಷರ ದಾಸೋಹದ ಕಟ್ಟಡದ ಅನುದಾನಕ್ಕೆ ಶಾಸಕರಿಗೆ ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಶಿಕ್ಷಕರನ್ನು ಒದಗಿಸುವಂತೆ ಡಿಡಿಪಿಐ ಅವರಿಗೆ ಬೇಡಿಕೆ ಮನವಿ ಸಲ್ಲಿಸಲಾಯಿತು. ಡಿಡಿಪಿಐ ಮಲ್ಲೇಸ್ವಾಮಿ ಮಾತನಾಡಿ, ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ಒದಗಿಸುವ ಭರವಸೆಯನ್ನು ನೀಡಿದರು.
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯೆ ಪದ್ಮಾವತಿ ಪೂಜಾರಿ, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಡಿಡಿಪಿಐ ಮಲ್ಲೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಪೂಜಾರಿ, ಶಿಕ್ಷಣ ಸಂಯೋಜಕರಾದ ಸುಶೀಲಾ, ಸುಧಾ, ಬಿಆರ್‌ಪಿ ರಾಘವೇಂದ್ರ ಬಳ್ಳಾಲ್, ಸಿಆರ್‌ಪಿ ರವಿಕುಮಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮೌರಿಸ್ ಡಿಸೋಜ, ಪ್ರೌಢಶಾಲಾ ಮುಖ್ಯಶಿಕ್ಷಕಿ ಅನಿತಾ ಉಪಸ್ಥಿತರಿದ್ದರು. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿದರು. ಪ್ರೌಢಶಾಲಾ ಎಸ್‌ಡಿಎಂಸಿ ಕಾಯಾಧ್ಯಕ್ಷ ಪುರುಷೋತ್ತಮ ಅಂಚನ್ ವಂದಿಸಿದರು.
Be the first to comment on "ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಹೈಸ್ಕೂಲ್ ಉದ್ಘಾಟನೆ"