ಸಂಚಾರಕ್ಕೆ ಆಯೋಗ್ಯವಾಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತೇಪೆ ಹಾಕುವುದನ್ನು ಬಿಟ್ಟು ಸಂಪೂರ್ಣ ಡಾಮಾರೀಕರಣಗೊಳಿಸಿ ಸುಸ್ಥಿತಿಗೆ ತರಬೇಕು ಇಲ್ಲವೆ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಪುನರಾರಂಭಿಸುವಂತೆ ಬಂಟ್ವಾಳ ಕ್ಷೇತ್ರ ಎಸ್ .ಡಿ .ಪಿ .ಐ 20 ದಿನಗಳ ಗಡುವು ನೀಡಿದೆ.
ಶನಿವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿ ಪಿ ಐ ದ.ಕ.ಜಿಲ್ಲಾ ಪ್ರ.ಕಾರ್ಯದರ್ಶಿ ಸಾಹುಲ್ ಹಮೀದ್ ಕಳೆದ ತಿಂಗಳ 29 ರಂದು ಪಕ್ಷದ ವತಿಯಿಂದ ನಡೆಸಲಾದ ಪ್ರತಿಭಟನೆಯ ಹಿನ್ನಲೆಯಲ್ಲಿ ಇದೀಗ ಹೆದ್ದಾರಿಯಲ್ಲಿರುವ ಬೃಹತ್ ಗಾತ್ರದ ಗುಂಡಿಗೆ ತೇಪೆ ಹಾಕುವ ಕಾರ್ಯ ಆರಂಭಗೊಂಡಿದೆ ಎಂದರು. ಈ ರೀತಿ ತೇಪೆ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ, ಮಳೆ ಸುರಿದರೆ ಮತ್ತೆ ಹೊಂಡಗಳು ಪ್ರತ್ಯಕ್ಷವಾಗುವ ಸಾಧ್ಯತೆ ಇದೆ.ಹಾಗಾಗಿ ಮಂಗಳೂರು-ಬೆಂಗಳೂರು ಹೆದ್ದಾರಿಯನ್ನು ಡಾಮಾರೀಕರಣಗೊಳಿಸಿ ಸುಸ್ಥಿತಿಗೆ ತರುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಚತುಷ್ಪಥ ರಸ್ತೆ ಕಾಮಗಾರಿ ಆರಂಭಿಸಿ: ರಾ.ಹೆ.75ರ ಹಾಸನ-ಸಕಲೇಶ್ ಪುರ ಹಾಗೂ ಗುಂಡ್ಯ-ಬಿ.ಸಿ.ರೋಡ್ ನಡುವಣ ಚತುಷ್ಪಥ ರಸ್ತೆ ಕಾಮಗಾರಿ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದು,ಹೆದ್ದಾರಿಯಲ್ಲಿರುವ ಹೊಂಡ,ಗುಂಡಿಯಿಂದ ವಾಹನ ಸಂಚಾರವೇ ದುಸ್ತರವಾಗಿದೆ,ಈಗಾಗಲೇ ಪ್ರತಿನಿತ್ಯ ಅಪಘಾತಗಳು ಸಂಭವಿಸಿ ಸಾವು,ನೋವು ಸಂಭವಿಸುತ್ತಿದೆ.ಆದರೂ ಸಂಸದರು,ಶಾಸಕರುಗಳು,ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಚಕಾರವತ್ತದಿರುವುದು ಜನಸಾಮಾನ್ಯರ ಕುರಿತು ಇವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಬಂಟ್ವಾಳ ಕ್ಷೇತ್ರ ಎಸ್ ಡಿ ಪಿ ಐ ಅಧ್ಯಕ್ಷ ಯೂಸೂಫ್ ಆಲಡ್ಕ ಅವರು ಟೀಕಿಸಿದರು. ಮುಂದಿನ 20 ದಿನದೊಳಗಾಗಿ ಹೆದ್ದಾರಿಯನ್ನು ಸಂಪೂರ್ಣ ಡಾಮಾರೀಕರಣಗೊಳಿಸಬೇಕು ಇಲ್ಲವೇ ಸ್ಥಗಿತಗೊಂಡಿರುವ ಹೆದ್ದಾರಿ ಕಾಮಗಾರಿಯನ್ನು ಪುನರಾರಂಭಿಸಬೇಕು ಇಲ್ಲದಿದ್ದಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ವತಿಯಿಂದ ನೆಲ್ಯಾಡಿ,ಉಪ್ಪಿನಂಗಡಿ,ಮಾಣಿ,ಕಲ್ಲಡ್ಕ,ಮೆಲ್ಕಾರ್ ಮೊದಲಾದ ಪ್ರದೇಶಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಮೊನೀಶ್ ಆಲಿ,ಪ್ರ.ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.
Be the first to comment on "ತೇಪೆ ಹಾಕುವ ಬದಲು ಸಂಪೂರ್ಣ ಸುಸ್ಥಿತಿಗೆ ತನ್ನಿ: ಚತುಷ್ಪಥ ಕಾಮಗಾರಿ ಪುನಾರಂಭಕ್ಕೆ 20 ದಿನಗಳ ಗಡುವು ನೀಡಿದ ಎಸ್.ಡಿ.ಪಿ.ಐ."