ರಾಷ್ಟ್ರೀಯ ತೋಟಗಾರಿಕಾ ಮಿಷನ್ ಸಹಯೋಗದಲ್ಲಿ ಕಳ್ಳಿಗೆ ಗ್ರಾಮದ ಕೆ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರ ತೋಟದಲ್ಲಿ ನಿರ್ಮಿಸಲಾದ ಸೌರ ಶಾಖ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಸೌರ ಶಾಖ ಪೆಟ್ಟಿಗೆಯನ್ನು ಫಲಾನುಭವಿ ಕೃಷಿಕ ಭುವನೇಶ್ ಪಚ್ಚಿನಡ್ಕ ಅವರಿಗೆ ಹಸ್ತಾಂತರ ಮಾಡಿದರು.
ವ್ಯವಸ್ಥಾಪಕ ಹಾಗೂ ತೆಂಗು ಸೌಹಾರ್ದ ಸಹಕಾರಿಯ ಅಧ್ಯಕ್ಷ ರಾಜಾ ಬಂಟ್ವಾಳ್ ಸೌರ ಶಾಖ ಪೆಟ್ಟಿಗೆ ಮಹತ್ವವನ್ನು ವಿವರಿಸಿ ಇದರಲ್ಲಿ ತೆಂಗು, ಅಡಿಕೆ, ಕಾಳು ಮೆಣಸು, ಶುಂಠಿ, ಅರಿಶಿನ, ಹಣ್ಣು ಹಂಪಲು, ಬೀಜ ಸಂಗ್ರಹಕ್ಕಾಗಿ ತರಕಾರಿ, ಕೃಷಿ ಉತ್ಪನ್ನ ವಸ್ತುಗಳು, ಗಿಡ ಮೂಲಿಕೆ ಔಷಧೀಯ ಸಸ್ಯಗಳನ್ನು ಒಣಗಿಸುವ ವ್ಯವಸ್ಥೆಯನ್ನು ವೈಜ್ಞಾನಿಕ ಕ್ರಮದಲ್ಲಿ ಮಾಡುವುದು. ಇದರಿಂದ ಉತ್ಪನ್ನವು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಸಮಯದ ಉಳಿತಾಯ, ಕನಿಷ್ಠ ಖರ್ಚು ವೆಚ್ಚ, ಕ್ರಿಮಿ ಕೀಟಗಳಿಂದ ರಕ್ಷಣೆಯು ಒದಗುವುದು ಎಂದರು.
ಶಾಖ ಪೆಟ್ಟಿಗೆಯು 50 ಅಡಿ ಉದ್ದ, 12.5 ಅಡಿ ಅಗಲ, 11 ಅಡಿ ಎತ್ತರ ಇರುವಂತೆ ನಿರ್ಮಾಣ ಮಾಡಲಾಗಿದೆ. ಒಳ ಭಾಗದಲ್ಲಿ 6 ಟ್ರಾಲಿ, 96 ಟ್ರೇಗಳು ಮತ್ತು 4 ಹೀಟರ್‌ಗಳು 4 ಟರ್ಬೊ ವೆಂಟೀಲೇಟರ್‌ಗಳು ಹಾಗೂ ಎಕ್ಸಾಸ್ಟ್ ಫ್ಯಾನ್‌ಗಳು ಅಳವಡಿಸವಾಗಿದೆ. ಒಳ ಭಾಗದ ಉಷ್ಣಾಂಶವನ್ನು ನಿಯಂತ್ರಿಸಲು ಸ್ವಯಂ ಚಾಲಿತ ವ್ಯವಸ್ಥೆ ಇರುವುದು. ವಿದ್ಯುತ್ ಸಂಪರ್ಕ ಕಡಿತವಾದಲ್ಲಿ ಹೆಚ್ಚುವರಿ 1 ಕಿ.ವ್ಯಾಟ್ ಸೌರ ಶಕ್ತಿ ವಿದ್ಯುತ್ ಸಂಪರ್ಕವನ್ನು ಪ್ರತ್ಯೇಕವಾಗಿ ಅಳವಡಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಒಟ್ಟು ಮೂರು ಇಂತಹ ಘಟಕಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಸ್ಥಾಪಿಸಲಾಗಿದೆ ಎಂದರು.
ಶಾಖ ಪೆಟ್ಟಿಗೆ ನಿರ್ಮಾಣಕ್ಕೆ 6.31 ಲಕ್ಷ ರೂ. ವೆಚ್ಚ ಆಗುತ್ತಿದ್ದು 2.28 ಲಕ್ಷ ರೂ. ಸಹಾಯ ಧನ ತೋಟಗಾರಿಕಾ ಇಲಾಖೆಯಿಂದ ನೀಡಲಾಗುತ್ತದೆ. ಶಾಖ ಪೆಟ್ಟಿಗೆಯ ನಿರ್ಮಾಪಕ ಎಸ್.ಆರ್.ಬಿ. ಇಂಡಸ್ಟ್ರೀಸ್ ಮಾಲಕ ರವೀಂದ್ರ ಆರ್., ತೆಂಗು ಸೌಹಾರ್ದ ಸಹಕಾರಿಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಿತ್ ಉಪಸ್ಥಿತರಿದ್ದರು.
Be the first to comment on "ತೋಟಗಾರಿಕಾ ಮಿಷನ್ ಸಹಯೋಗದಲ್ಲಿ ಸೌರಶಾಖಪೆಟ್ಟಿಗೆ ನಿರ್ಮಾಣ"