ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಹೊರಡಿಸಿರುವ ವಿವಿಧ ಸುಗ್ರೀವಾಜ್ಞೆಗಳು ರೈತ, ಕಾರ್ಮಿಕ ಮತ್ತು ದಲಿತ ವಿರೋಧಿಯಾಗಿದೆ ಎಂದು ಆಪಾದಿಸಿ, ಬಂಟ್ವಾಳ ಮಿನಿ ವಿಧಾನಸೌಧದ ಮುಂಭಾಗ ರೈತರ, ದಲಿತ, ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಗುರುವಾರ ಬೆಳಗ್ಗೆ ನಡೆಯಿತು.
ರೈತ ಮತ್ತು ಇತರ ಸಂಘಟನೆಗಳಾದ ಕೆ.ಆರ್.ಪಿ.ಎಸ್., ಕೆ.ಆರ್.ಆರ್.ಎಸ್, ಸಿ.ಐ.ಟಿ.ಯು, ಡಿ.ವೈ.ಎಫ್.ಐ, ಪ್ರಜಾಪರಿವರ್ತನಾ ವೇದಿಕೆ, ಮಾನವ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡವು.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ, ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳು ಬಂಡವಾಳಶಾಹಿಗಳ ಪರವಾಗಿದ್ದು, ಬಡವರ, ರೈತರ, ಕಾರ್ಮಿಕರ ಮತ್ತು ದಲಿತರ ವಿರೋಧಿಯಾಗಿದೆ. ಸರ್ಕಾರ ಇಂದು ಜನರ ಹಿತವನ್ನು ನಿರ್ಲಕ್ಷಿಸಿ, ಉದ್ಯಮಪತಿಗಳ ಪರವಾಗಿದೆ ಎಂದು ಭಾಷಣಕಾರರು ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ಪ್ರಾಂತ ರೈತಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಸರ್ಕಾರದ ನೀತಿಯನ್ನು ಕಟುವಾಗಿ ಟೀಕಿಸಿದರು.
ಪ್ರಮುಖರಾದ ಪ್ರೇಮನಾಥ ಶೆಟ್ಟಿ, ಹಾರೂನ್ ರಶೀದ್, ಪ್ರಸಾದ್ ಶೆಟ್ಟಿ ಪೆರಾಬೆ , ರಾಜಶೇಖರ ಶೆಟ್ಟಿ, ಸುರೇಂದ್ರ ಕೋಟ್ಯಾನ್, , ಮಹಮ್ಮದ್ ಇಕ್ಬಾಲ್ ಹಳೆಮನೆ, ತುಳಸೀದಾಸ್ ವಿಟ್ಲ, ರಮೇಶ್ ನಾಯಕ್ ರಾಯಿ, ಚಂದಪ್ಪ ಮೂಲ್ಯ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Be the first to comment on "ರೈತ, ಕಾರ್ಮಿಕ, ದಲಿತ ವಿರೋಧಿಯಾದ ಸುಗ್ರೀವಾಜ್ಞೆ: ಬಂಟ್ವಾಳದಲ್ಲಿ ಸಂಘಟನೆಗಳಿಂದ ಪ್ರತಿಭಟನೆ"