ಮಾಜಿ ಸಚಿವ ಬಿ.ರಮಾನಾಥ ರೈ ಅವರ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರ ಏರ್ಪಡಿಸುವುದು ಹಾಗೂ ಬಡ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ವಿಶಿಷ್ಟವಾಗಿ ಬಂಟ್ವಾಳ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಆಚರಿಸಿದರು. ಮಹಿಳಾ ಕಾಂಗ್ರೆಸ್ ವತಿಯಿಂದ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಿಸಲಾಯಿತು. ಬಿ.ಸಿ.ರೋಡ್ ನ ರಂಗೋಲಿ ಹೋಟೆಲ್ ಸಭಾಂಗಣ ಮತ್ತು ಇರ್ವತ್ತೂರಿನಲ್ಲಿ ರಕ್ತದಾನ ಶಿಬಿರ ನಡೆಯಿತು. ಇದೇ ವೇಳೆ ರಮಾನಾಥ ರೈ ಅವರು ಕ್ಷೇತ್ರದಾದ್ಯಂತ ಸಂಚರಿಸಿ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಪಂಜಿಕಲ್ಲು ಶ್ರೀ ಬಾಲೇಶ್ವರ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಭಾನುವಾರ ಶ್ರೀ ಕೊಡಮಣಿತ್ತಾಯ ದೈವಕ್ಕೆ ನಡೆದ ನೇಮೋತ್ಸವದಲ್ಲಿ ರೈ ಪಾಲ್ಗೊಂಡರು.
ಭಾನುವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ತನ್ನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಂಟ್ವಾಳದ ಉಭಯ ಬ್ಲಾಕ್ ಗಳ ಸಹಿತ ಬಂಟ್ವಾಳ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಅಭಿನಂದನಾ ಸಮಾರಂಭದಲ್ಲಿ ರೈ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ರೈ ರಕ್ತದಾನ ಶಿಬಿರ ಆಯೋಜಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಮನುಷ್ಯನ ರಕ್ತವೆಲ್ಲವೂ ಒಂದೇ, ಮನುಷ್ಯನನ್ನು ಯಾವುದೇ ಜಾತಿ, ಧರ್ಮ ಎಂಬ ತಾರತಮ್ಯ ಎಂದು ನೋಡದೆ ಪ್ರೀತಿಸುವ ತನ್ನ ಜನ್ಮದಿನಕ್ಕೆ ರಕ್ತದಾನ ಏರ್ಪಡಿಸಿರುವುದು ಸಂತಸದ ವಿಚಾರ ಎಂದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ, ಮನಪಾ ಸದಸ್ಯ ಎಂ.ಶಶಿಧರ್ ಹೆಗ್ಡೆ, ಜಿ.ಪಂ.ಸದಸ್ಯರಾದ ಮಂಜುಳಾ ಮಾವೆ, ಶಾಹುಲ್ ಹಮೀದ್, ಬಂಟ್ವಾಳ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸದಸ್ಯೆ ನಸೀಮಾ ಬೇಗಂ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪುರಸಭಾ ಸದಸ್ಯ ಲುಕ್ಮಾನ್ ಬಂಟ್ವಾಳ, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಶೆರಿಲ್ ಐಯೊನಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಂತಿ ಪೂಜಾರಿ, ಫ್ಲೋಸಿ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ, ಅಗಲಿದ ನಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇಂಟಕ್ ಮುಖಂಡ, ಬಂಟ್ವಾಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ರಕ್ತದಾನ ಶಿಬಿರ, ಬಡರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಮಾಜಿ ಸಚಿವ ರೈ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು"