ಬಂಟ್ವಾಳ ತಾಲೂಕಿನ ಕೆಲ ಸರ್ಕಾರಿ ಶಾಲೆಗಳಲ್ಲೀಗ ಆಶಾದಾಯಕ ಬೆಳವಣಿಗೆ. ಮಕ್ಕಳ ದಾಖಲಾತಿ ಗಣನೀಯವಾಗಿ ಈ ಶಾಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗುತ್ತಿದೆ.
ದಡ್ಡಲಕಾಡು ಸರ್ಕಾರಿ ಶಾಲೆಗೆ ಈ ವರ್ಷ ದಾಖಲೆಯ 273 ಮಕ್ಕಳು ಸೇರ್ಪಡೆಯಾದರೆ, ಕಲ್ಲಡ್ಕದಲ್ಲಿರುವ ಸರ್ಕಾರಿ ಶಾಲೆಗೆ 100 ಮಕ್ಕಳು ಬಂದಿದ್ದಾರೆ. ದಡ್ಡಲಕಾಡು ಶಾಲೆಗೆ 2ರಿಂದ 8ನೇ ತರಗತಿವರೆಗೆ 135 ಮಕ್ಕಳು ಸೇರ್ಪಡೆಗೊಂಡರೆ, 1ನೇ ತರಗತಿಗೆ 104 ಮಕ್ಕಳು ಸೇರ್ಪಡೆಯಾಗಿದೆ. 9ನೇ ತರಗತಿ ಇಲ್ಲಿ ಹೊಸದಾಗಿ ಆರಂಭಗೊಂಡಿದ್ದು, 34 ಮಂದಿ ಸೇರಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಈ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು.
ಕಲ್ಲಡ್ಕ ಪೇಟೆಯಲ್ಲೇ ಇರುವ ದ.ಕ.ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ವರ್ಷ 1ನೇ ತರಗತಿಗೆ 65 ಮಕ್ಕಳು ಸೇರಿದರೆ, 2ರಿಂದ 8ನೇ ತರಗತಿವರೆಗೆ 35 ಮಕ್ಕಳ ಸೇರ್ಪಡೆಯಾಗಿದೆ. ಇದೇ ಶಾಲೆಯಲ್ಲಿ ಮೂರು ವರ್ಷಗಳ ಹಿಂದೆ ಸೇರ್ಪಡೆಯಾದದ್ದು 9 ಮಕ್ಕಳು. ಎರಡು ವರ್ಷಗಳ ಹಿಂದೆ 23, ಕಳೆದ ವರ್ಷ ಒಂದನೇ ತರಗತಿಗೆ 37 ದಾಟಿತ್ತು. ಒಟ್ಟಾರೆಯಾಗಿ ದಡ್ಡಲಕಾಡು ಶಾಲೆಗೆ 273 ಮತ್ತು ಕಲ್ಲಡ್ಕ ಶಾಲೆಗೆ 100 ಮಕ್ಕಳು ಸೇರಿದಂತಾಗಿದೆ. ಇನ್ನು ಉಳಿದ ಸರ್ಕಾರಿ ಶಾಲೆಗಳೂ ದಾಖಲಾತಿಯಲ್ಲಿ ಹಿಂದೆ ಬಿದ್ದಿಲ್ಲ. ಜೀವನಶೈಲಿಯ ಬದಲಾವಣೆ, ಆದಾಯದ ಹೊಂದಾಣಿಕೆಯಷ್ಟೇ ಇದಕ್ಕೆ ಕಾರಣವಲ್ಲ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕಾ ಶಿಕ್ಷಣವನ್ನು ನುರಿತ ಬೋಧಕವೃಂದದಿಂದ ಒದಗಿಸುವುದು ಪ್ರಧಾನ ಆಕರ್ಷಣೆ ಎನ್ನಲಾಗುತ್ತಿದೆ.
Be the first to comment on "ಮರುಜೀವ ಪಡೆದ ಸರ್ಕಾರಿ ಶಾಲೆಗಳು, ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆ"