- ಹರೀಶ ಮಾಂಬಾಡಿ
ವರ್ಷ ಎರಡಾಯಿತು.
2018, ಆಗಸ್ಟ್ 31ರಂದು ನಡೆದ ಬಂಟ್ವಾಳ ಪುರಸಭೆ ಚುನಾವಣೆಗೆ ಸಂಬಂಧಿಸಿ ಸೆ.3ರಂದು ನಡೆದ ಕೌಂಟಿಂಗ್ ನ ಫಲಿತಾಂಶ ಹೀಗಿದೆ. 27 ಸ್ಥಾನಗಳ ಪೈಕಿ ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ.ಐ. 4 ಸ್ಥಾನ. ಶಾಸಕ, ಸಂಸದರ ಮತಬಲದಿಂದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಾದರೆ, ಬಿಜೆಪಿಗೆ 13 ಮತ ಪಡೆಯುವ ಅವಕಾಶ ಇದೆ. ಆಗ ಬಿಜೆಪಿ 13, ಕಾಂಗ್ರೆಸ್ 12, ಎಸ್.ಡಿ.ಪಿ.ಐ. 4. ಆಗುತ್ತದೆ. ಇಲ್ಲಿ ಎಸ್.ಡಿ.ಪಿ.ಐ. ತಳೆಯುವ ನಿರ್ಧಾರವೇ ನಿರ್ಣಾಯಕ.
ಅಧಿಕಾರ ಯಾರಿಗೆ ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದಂತೆ ಮೀಸಲಾತಿ ಪಟ್ಟಿ ಬದಲಾಯಿತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಲಾಯಿತು. ಬಳಿಕ ರಾಜ್ಯದಲ್ಲೇ ಸರ್ಕಾರಗಳು ಬದಲಾದರೂ, ನೇತ್ರಾವತಿ ನದಿಯಲ್ಲಿ ಸಾಕಷ್ಟು ನೀರು ಹರಿದರೂ ಬಂಟ್ವಾಳ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗಲಿಲ್ಲ. ಜನರಿಂದ ಚುನಾಯಿತರಾದವರು ಹೆಸರಿಗಷ್ಟೇ ಚುನಾಯಿತರೇ ಹೊರತು ಅಧಿಕಾರ ಚಲಾಯಿಸಲು ಅವರಿಗೂ ಅವಕಾಶ ದೊರೆಯಲಿಲ್ಲ. ಕಳೆದ ವಾರ ಪೌರಾಡಳಿತ ಸಚಿವ ಡಾ. ನಾರಾಯಣಗೌಡ ಪುರಸಭಾ ವ್ಯಾಪ್ತಿಗೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಶೀಘ್ರವಾಗುತ್ತದೆ ಎಂದಿದ್ದಾರೆ. 1974ರಿಂದ ಇಂದಿನವರೆಗೆ ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳು ಇಲ್ಲದ ಸಂದರ್ಭ ಆಡಳಿತಾಧಿಕಾರಿಗಳೇ ಅಧಿಕಾರ ನಡೆಸಿದ ಉದಾಹರಣೆಗಳಿವೆ. 1983ರಿಂದ 1984ರವರೆಗೆ 1 ವರ್ಷ ಆಡಳಿತಾಕಾರಿ 1988ರ ಡಿಸೆಂಬರ್ 31 ರಿಂದ 1990, ಮೇ 25ರವರೆಗೆ ಸುಮಾರು ಎರಡೂವರೆ ವರ್ಷ, 1995ರ ಮೇ 20ರಿಂದ 1996 ನವೆಂಬರ್ 23ರವರೆಗೆ ಸುಮಾರು ಒಂದೂವರೆ ವರ್ಷ, ಡಿಸೆಂಬರ್ 30, 2006ರಿಂದ 2008ರ ಫೆ.20ರವರೆಗೆ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಿದ್ದರು.
Be the first to comment on "ಪುರಸಭೆ ಫಲಿತಾಂಶ ಬಂದು ಎರಡು ವರ್ಷ, ಗೆದ್ದವರಿಗೆ ಅಜ್ಞಾತವಾಸ"