ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಬೆಳ್ಳಿಬೈಲು ನಿವಾಸದ ಹೊಕ್ಕಳಗುತ್ತು ಪ್ರಗತಿಪರ ಕೃಷಿಕ ವೆಂಕಪ್ಪ ಪೂಜಾರಿ ಮತ್ತು ತಾಲೂಕಿನ ಪ್ರತಿಷ್ಠಿತ ಬಿಲ್ಲವ ಕುಟುಂಬ ಮುಗ್ಗಗುತ್ತು ನೀಲಮ್ಮ ದಂಪತಿಯ ಹನ್ನೊಂದು ಮಕ್ಕಳ ತುಂಬು ಕುಟುಂಬದಲ್ಲಿ 4ನೇ ಮಗುವಾಗಿ 1950 ಆ.16ರಂದು ಜನಿಸಿದ ಪೀತಾಂಬರ ಹೇರಾಜೆಯವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ.
ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಬೆಳ್ತಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಪೂರೈಸಿ ನಂತರ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜ್‍ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿದರು. ವಿದ್ಯಾರ್ಥಿ ಬದುಕಿನಲ್ಲಿ ಗುರುಗಳ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿ ಕಲಿಕೆಯೊಂದಿಗೆ ಕ್ರೀಡೆ ಹಾಗೂ ತುಳು ರಂಗ ಭೂಮಿ ಸಹಿತ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು ಅಲ್ಲದೆ ಓರ್ವ ಅತ್ಯುತ್ತಮ ಕಬಡ್ಡಿ ಆಟಗಾರರಾಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದರು. ಜೊತೆಗೆ ವಿದ್ಯಾರ್ಥಿದೆಸೆಯಿಂದಲೇ ಸಂಘಟನಾ ಚತುರರಾಗಿ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರು.
ಪದವಿ ಶಿಕ್ಷಣವನ್ನು ಪೂರೈಸಿದ ಬಳಿಕ ಪೊಲೀಸ್ ಸೇವೆಗೆ ಸೇರಿದ ಅವರು, ನಂತರ ರಾಜ್ಯದ ಬಳ್ಳಾರಿ, ಹುಬ್ಬಳ್ಳಿ, ಬೆಳಗಾಂ, ಬೆಂಗಳೂರು, ಚಿಕ್ಕಬಳ್ಳಾಪುರ, ದ.ಕ (ಮಂಗಳೂರು) ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಪೊಲೀಸ್ ವರಿಷ್ಠಾಧಿಕಾರಿ ಆಗಿ ಕರ್ತವ್ಯ ಸಲ್ಲಿಸಿ ನಿವೃತ್ತರಾದರು. ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳಿಂದ ಆಯಾ ಊರ ನಾಗರಿಕರಿಂದ ದಕ್ಷ ಅಧಿಕಾರಿ ಎಂದೆಣಿಸಿ ಕೊಂಡರು. ಸೇವಾ ಅವಧಿಯಲ್ಲಿ ರಾಷ್ಟ್ರಪತಿ ಟಿ.ಎನ್ ಚತುರ್ವೇದಿ ಅವರಿಂದ ರಾಷ್ಟ್ರಪತಿ ಪದಕದ ಗೌರವ, ಮುಖ್ಯಮಂತಿಗಳಾದ್ರ ಧರಂ ಸಿಂಗ್ ಮತ್ತು ಎಸ್.ಎಂ ಕೃಷ್ಣ ಅವರಿಂದ ಚಿನ್ನದ ಪದಕ ಗೌರವ ಸೇರಿದಂತೆ 500ಕ್ಕೂ ಮಿಕ್ಕಿ ಪ್ರಶಸ್ತಿಗಳಿಗೆ ಭಾಜನರಾಗಿ ಓರ್ವ ದಕ್ಷ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿ ಆಗಿದ್ದಾರೆ.
ಧಾರ್ಮಿಕ, ಸಾಮಾಜಿಕ ಚಟುವಟಿಕೆ:
ಸ್ವತ: ದೇಣಿಗೆ ನೀಡಿರುವುದಲ್ಲದೆ ದಾನಿಗಳಿಂದ ಕೊಡುಗೆ ಸಂಗ್ರಹಿಸಿ ತನ್ನ ಹುಟ್ಟೂರು ಬೆಳ್ತಂಗಡಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಶ್ರೀ ಗುರುರಾಘವೇಂದ್ರ ಮಠ ಲಾೈಲ, ಬೆಳ್ತಂಗಡಿಯ ಹೃದಯ ಭಾಗದಲ್ಲಿರುವ ಶ್ರೀ ನಾರಾಯಣಗುರು ಸಂಕೀರ್ಣ ನಿರ್ಮಾಣ ಮಾಡಿರುತ್ತಾರೆ. ದಕ್ಷಿಣದ ಅಯೋದ್ಯೆ ಎಂದೇ ಕರೆಯಲ್ಪಡುವ ಕನ್ಯಾಡಿ ಶ್ರೀ ರಾಮಕ್ಷೇತ್ರದ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೂ ಸಹಕಾರ ನೀಡಿ ಓರ್ವ ದಕ್ಷ ಧಾರ್ಮಿಕ ಮುಂದಾಳುವಾಗಿದ್ದಾರೆ. ಲಾೈಲ ಇಲ್ಲಿನ ಶ್ರೀ ಗುರುರಾಘವೇಂದ್ರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ, ಬೆಳ್ತಂಗಡಿಯ ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್‍ನ ಸದಸ್ಯರಾಗಿ ಸಂಸ್ಥೆಯ ಬೆಳವಣಿಗೆಗೆ ತೊಡಗಿಸಿ ಕೊಂಡಿದ್ದು, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ನಾಲ್ಕು ವರ್ಷಅಧ್ಯಕ್ಷರಾಗಿ ಸೇವೆಯೊಂದಿಗೆ ತನ್ನ ಅಧ್ಯಕ್ಷ ಕಾಲಾವಧಿಯಲ್ಲಿ ಯಶಸ್ವಿಯಾಗಿ ಸುವರ್ಣ ಮಹೋತ್ಸವ ಆಚರಿಸಿದ ಹಿರಿಮೆ ಇವರದ್ದು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷರಾಗಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜ್‍ನ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಕಾಲೇಜ್‍ನ ಹಳೆ ವಿದ್ಯಾಥಿರ್ಥಿ ಸಂಘದ ಅಧ್ಯಕ್ಷರಾಗಿ, ಬೆಳ್ತಂಗಡಿ ರೋಟರಿ ಕ್ಲಬ್‍ನ ಸದಸ್ಯರಾಗಿ, ದ.ಕ ಜಿಲ್ಲಾ ಆಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಉಪಾಧ್ಯಕ್ಷರಾಗಿ ಹಾಗೂ ಗೌರವ ಸಲಹೆಗಾರರಾಗಿ ಸೇರಿದಂತೆ ಹಲವಾರು ಸಂಘ ಸಂಸ್ಢೆಗಳಲ್ಲಿ ಸಮಾಜ ಸೇವೆ ಗೈಯುತ್ತಿದ್ದಾರೆ.
ಪುತ್ತೂರು ತಾಲೂಕು ಬಡಗನ್ನೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪುನರ್ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಯಶಸ್ವಿ ಕಾರ್ಯಕ್ರಮ ಜರುಗಿಸಿ ಗುರುತಿಸಿಕೊಂಡಿದ್ದಾರೆ.
ಪತ್ನಿ ಸಂಗೀತ ಪಿ.ಹೇರಾಜೆ ಮತ್ತು ಪರಿವಾರದೊಂದಿಗೆ ತನ್ನ ಬಾಳಿನ 70ನೇ ಸಂವತ್ಸರಗಳನ್ನು ಪೂರೈಸಿ ಮುನ್ನಡೆಯುತ್ತಿರುವ ಇವರ ಭಾವೀ ಜೀವನ ಆಯುರಾರೋಗ್ಯದಾಯಕವಾಗಿದ್ದು ಸುಖ, ಶಾಂತಿ, ನೆಮ್ಮದಿ, ಸಂತೃಪ್ತಿಯಿಂದಕೂಡಿರಲಿ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ನಿಕಟಪೂರ್ವ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಭಾರತ್ ಬ್ಯಾಂಕ್‍ನ ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ನ್ಯಾಯವಾದಿ ಮತ್ತು ನೋಟರಿ ಮುಗ್ಗಗುತ್ತು ಚಂದ್ರಶೇಖರ್ ಪೂಜಾರಿ (ಬಂಟ್ವಾಳ), ಉದ್ಯಮಿಗಳಾದ ಸುರೇಂದ್ರ ಎ.ಪೂಜಾರಿ, (ಸಾಯಿಕೇರ್), ರಿತೇಶ್ ಪೂಜಾರಿ ಮಲಾಡ್ ಸೇರಿದಂತೆ ಅವರ ಅಭಿಮಾನಿ ಬಳಗ, ಹಿತೈಷಿಗಳು, ಹೇರಾಜೆ ಕುಟುಂಬಸ್ಥರು ಶತಾಯುಷ್ಯ ಹಾರೈಸಿದ್ದಾರೆ.
Be the first to comment on "70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಕ್ಷ ಅಧಿಕಾರಿ, ಸಮಾಜಸೇವಕ ಪೀತಾಂಬರ ಹೇರಾಜೆ"