ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ವಾರದೊಳಗೆ ತಾಲೂಕಿನ ಎ ದರ್ಜೆ ದೇವಸ್ಥಾನದಿಂದ ಹೆಚ್ಚುವರಿ ಡಯಾಲಿಸಿಸ್ ಯಂತ್ರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರೊಂದಿಗೆ ಶುಕ್ರವಾರ ಸಂಜೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡ ಅವರಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳ ಸರಕಾರಿ ಆಸ್ಪತ್ರೆ ಯಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಅತೀ ಹೆಚ್ಚಿನ ಬೇಡಿಕೆ ಇದ್ದು 2 ಯಂತ್ರಗಳು ದಿನವೊಂದಕ್ಕೆ 10 ರೋಗಿ ಗಳಿಗೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ತಾಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ದುಬಾರಿ ಖರ್ಚು ಮಾಡಿ ಮಂಗಳೂರಿಗೆ ತೆರಳಬೇಕಾಗುತ್ತದೆ.ಅಲ್ಲಿಯೂ ರೋಗಿಗಳ ಸಂಖ್ಯೆ ಹೆಚ್ಚಿದ್ದು ಬಂಟ್ವಾಳ ಆಸ್ಪತ್ರೆ ಗೆ 2 ಡಯಾಲಿಸಿಸ್ ಯಂತ್ರ ನೀಡುವ ಬಗ್ಗೆ ಸಚಿವರ ಬಳಿ ಪ್ರಸ್ತಾಪಿಸಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಲತಾ ಆಸ್ಪತ್ರೆಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಪ್ರಸ್ತುತ 10 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯತ್ತಿದ್ದು ಈ ವರೆಗೆ 70 ಕೊರೊನಾ ಪೀಡಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿರುವುದಾಗಿ ತಿಳಿಸಿದರು. ಆಸ್ಪತ್ರೆಯ ಕೆಲವೊಂದು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಕೆ ಭಟ್ ಉಪಸ್ಥಿತರಿದ್ದರು.
Be the first to comment on "ವಾರದೊಳಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿ ಡಯಾಲಿಸಿಸ್ ಯಂತ್ರ: ಸಚಿವ ಕೋಟ ಭರವಸೆ"