ಅಂದಿನ ಸಂಕಷ್ಟದ ಬದುಕಿನ ಅನುಭವಗಳ ಜೊತೆಗೇ ಇಂದಿನ ಬದುಕನ್ನು ಕಟ್ಟಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಕೃತಿಯ ಜೊತೆಗಿನ ನಮ್ಮ ಹೊಂದಾಣಿಕೆಯ ಸಹಜ ಬದುಕೇ ಆಟಿ ತಿಂಗಳ ಸಂಕೇತ ಎಂದು ಪತ್ರಕರ್ತ ಗೋಪಾಲ ಅಂಚನ್ ಹೇಳಿದರು.
ಮಾಣಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಭಾನುವಾರ ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ” ಆಟಿದ ಮದಿಪು” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಬೇಸಿಗೆಯೂ ಅಲ್ಲದ ಮಳೆಗಾಲವೂ ಅಲ್ಲದ ಆಟಿ ತಿಂಗಳೆಂಬ ಸಂಧಿಕಾಲದಲ್ಲಿ ನಮ್ಮ ಹಿರಿಯರು ಹಸಿವು, ಭಯ ಹಾಗೂ ರೋಗವನ್ನು ಪರಿಹರಿಸಿಕೊಳ್ಳಲು ಕಂಡುಕೊಂಡ ಪ್ರಕೃತಿ ಸಹಜ ಮಾರ್ಗಗಳೇ ಆಟಿಯ ಕಟ್ಟುಪಾಡುಗಳಾಗಿ ಇಂದಿಗೂ ಉಳಿದುಕೊಂಡಿದೆ. ಪ್ರಕೃತಿಗೆ ಮುಖ ಮಾಡಿ ಬದುಕುವುದೇ ಆಟಿ ಆಚರಣೆಯ ಉದ್ಧೇಶವಾಗಬೇಕು. ಪಾಸ್ಟ್, ಟೇಸ್ಟ್, ಪೇಸ್ಟ್ ಫುಡ್ ಸಂಸ್ಕ್ರತಿಯಿಂದ ಹೊರಬರಲು ಆಟಿ ಆಚರಣೆಗಳು ಪ್ರೇರಣೆ ನೀಡಬೇಕು ಎಂದರು.
ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್ ಅನಂತಾಡಿ ಗಣಪತಿ ಪೂಜೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಸ್.ಆರ್., ಉಪನ್ಯಾಸಕಿ ರೇಣುಕಾ ಕಾಣಿಯೂರು ಮಾತನಾಡಿದರು.
ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೂಜಾರಿ ಬಾಬನಕಟ್ಟೆ, ಕಾರ್ಯಕ್ರಮ ಸಂಚಾಲಕ ಜಯಪ್ರಕಾಶ್ ಕೆದಿಲ ಉಪಸ್ಥಿತರಿದ್ದರು.
ಮಾಣಿ ಘಟಕದ ವತಿಯಿಂದ ನಿರ್ಮಾಣಗೊಂಡ ಆತ್ಮವಂದನಾ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು. ಘಟಕದ ಮಹಿಳಾ ಸದಸ್ಯರಿಗಾಗಿ ನಡೆಸಲಾಗಿದ್ದ ಆನ್ ಲೈನ್ ಅಡುಗೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾನಿಧಿ ಸಹಾಯಾರ್ಥದ ಅದೃಷ್ಟ ಚೀಟಿಯ ಬಹುಮಾನದ ಪ್ರಾಯೋಜಕರು, ಆಟಿ ತಿಂಗಳ ವಿಶೇಷ ತಿನಿಸುಗಳನ್ನು ಪ್ರಾಯೋಜಿಸಿದವರನ್ನು ಗೌರವಿಸಲಾಯಿತು. ಘಟಕದ ಉಪಾಧ್ಯಕ್ಷ ಪ್ರಶಾಂತ್ ಅನಂತಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಶಿವರಾಜ್ ಅನಂತಾಡಿ ವಂದಿಸಿದರು.
ಉಪನ್ಯಾಸಕ ದಿನಕರ್ ಬರಿಮಾರು ಹಾಗೂ ದೀಪಕ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ಹರೀಶ್ ಪೂಜಾರಿ ಬಾಕಿಲ, ತ್ರಿವೇಣಿ ರಮೇಶ್, ಜನಾರ್ದನ ಕೊಡಂಗೆ, ವಿಶ್ವನಾಥ ಮುಜಲ, ಕೇಶವ ಬರಿಮಾರು, ಜಯಂತ ಬರಿಮಾರ್, ರಾಜೇಶ್ ಬಲ್ಯ,ಬಾಲಕೃಷ್ಣ ದೇಲಬೆಟ್ಟು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಯುವವಾಹಿನಿ ಸದಸ್ಯ ಕಿಶನ್ ಕೆ.ಸಿ ತಂಡದ ಸದಸ್ಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಸಾಮಾಜಿಕ ಅಂತರ ಹಾಗೂ ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯಕ್ರಮ ನಡೆಸಲಾಯಿತು
Be the first to comment on "ಮಾಣಿ ಯುವವಾಹಿನಿ ಘಟಕ ಆಶ್ರಯದಲ್ಲಿ ಆಟಿದ ಮದಿಪು"