ಪುದು ಗ್ರಾ.ಪಂ.ವ್ಯಾಪ್ತಿಯಲ್ಲಿ ಹೆದ್ದಾರಿ ಬದಿ ಕೆಲವೊಂದು ಕಸದ ರಾಶಿ ಕಂಡುಬರುತ್ತಿದ್ದು, ಗ್ರಾಮದ ಸ್ವಚ್ಛತೆಗೆ ಯಾರೇ ಧಕ್ಕೆ ತಂದರೂ ಅಂತವರ ವಿರುದ್ಧ ಕ್ರಮಕೈಗೊಳ್ಳುವುದಕ್ಕೆ ಗ್ರಾ.ಪಂ.ಆಡಳಿತ ಮಂಡಳಿಗೆ ಅಧಿಕಾರವಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸೂಚನೆ ನೀಡಿದರು.
ಪುದು ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ.ನ ಕೋವಿಡ್-19 ಕಾರ್ಯಪಡೆಯ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ.ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು, ಪುದು ಗ್ರಾ.ಪಂ.ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ಕ್ರಮಕೈಗೊಳ್ಳಲಾಗಿದೆ. ಆದರೆ ಬೇರೆ ಪ್ರದೇಶದವರು ಇಲ್ಲಿ ಕಸ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅವರ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳಲಿದ್ದೇವೆ ಎಂದರು. ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ ಎಂ.ಎಸ್.ಮಾತನಾಡಿ, ಕೋವಿಡ್-19 ಕಾರ್ಯಾಚರಣೆಗೆ ಯಾರೇ ಅಡ್ಡಿ ಪಡಿಸಿದರೂ, ಠಾಣೆಗೆ ಮಾಹಿತಿ ನೀಡಿ. ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಜತೆಗೆ ಜನತೆಯಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಅಥವಾ ಸೋಪು ಬಳಕೆ, ಸಾಮಾಜಿಕ ಅಂತರ ಕಾಪಾಡುವ ಕುರಿತು ಗ್ರಾ.ಪಂ.ಜಾಗೃತಿ ಮೂಡಿಸುವಂತೆ ತಿಳಿಸಿದರು. ಆರೋಗ್ಯ ಇಲಾಖೆಯ ಕಾರ್ಯಾಚರಣೆ ಹಾಗೂ ಕೋವಿಡ್-19 ಜಾಗೃತಿಯ ಕುರಿತು ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುದರ್ಶನ್ ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಲಿಡಿಯಾ ಪಿಂಟೊ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಸ್ವಾಗತಿಸಿ, ವಂದಿಸಿದರು.
Be the first to comment on "ಸ್ವಚ್ಛತೆಗೆ ಧಕ್ಕೆ ತಂದರೆ ಪೊಲೀಸ್ ಸಹಕಾರದೊಂದಿಗೆ ಕಠಿಣ ಕ್ರಮ – ತಾಪಂ ಇಒ ಎಚ್ಚರಿಕೆ"