ರೈತರ ಪರವಾಗಿದ್ದೇವೆ ಎಂದು ಅಧಿಕಾರ ಸ್ವೀಕರಿಸಿದ ಮೌಲ್ಯಗಳನ್ನು ಮಾತನಾಡುವ ರಾಜಕಾರಣಿಯಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದು ನಾಚಿಕೆಕೇಡಿನ ವಿಚಾರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಹೇಳಿದರು.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಎಪಿಎಂಸಿ ಕಾಯ್ದೆ, ಬೀಜ ಕಾಯ್ದೆ ಹಾಗೂ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿಗಳು ರೈತರ ಮತ್ತು ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ. ರೈತರ ಉಳಿವಿಗೆ ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ದ.ಕ.ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ ಸರ್ಕಾರದ ನಿಲುವುಗಳನ್ನು ಖಂಡಿಸಲಾಗುತ್ತಿದೆ ಎಂದರು. ಕರೋನಾ ವೈರಸ್ ಲಾಕ್ ಡೌನ್ ಸಂದರ್ಭ ದುರುಪಯೋಗಪಡಿಸಿಕೊಂಡು, ಇಡೀ ದೇಶದ ಕೃಷಿ ಉತ್ಪಾದನೆ ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಪೂರಕವಾಗಿ ಕಾನೂನುಗಳಿಗೆ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ಸಂವಿಧಾನದ ಮೌಲ್ಯಗಳನ್ನು ಕೇಂದ್ರ, ರಾಜ್ಯ ಗಾಳಿಗೆ ತೂರಿವೆ ಎಂದವರು ಆಪಾದಿಸಿದರು. ಎರಡು ರೈತ ಸಂಘಗಳ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದು, ರಾಜ್ಯ, ಕೇಂದ್ರದ ನಿರ್ಧಾರಗಳನ್ನು ಖಂಡಿಸಿದರು. ಪ್ರಮುಖರಾದ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಕೆ.ಕೃಷ್ಣಪ್ಪ ಸಾಲ್ಯಾನ್, ಪ್ರೇಮನಾಥ ಶೆಟ್ಟಿ ಬಾಳ್ತಿಲ, ಅಲೆಕ್ಸ್ ರೋಡ್ರಿಗಸ್, ರಾಮಣ್ಣ ವಿಟ್ಲ, ಎಂ. ಸುಬ್ರಹ್ಮಣ್ಯ ಭಟ್, ಸುದೇಶ್ ಮಯ್ಯ, ಸತೀಶ್ ಚಂದ್ರ ರೈ ಕಡೇಶ್ವಾಲ್ಯ, ಸದಾನಂದ ಶೀತಲ್, ರೂಪನ್ ಪಿಂಟೊ, ಆಲ್ವಿನ್ ವಿ. ಲೋಬೊ, ವಿವಿಯನ್ ಪಿಂಟೊ ಸಹಿತ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದರು.
Be the first to comment on "ರೈತರನ್ನು ಕೆಣಕಿದರೆ ಸುಮ್ಮನಿರೋಲ್ಲ: ಕೇಂದ್ರ ರಾಜ್ಯಕ್ಕೆ ರೈತಸಂಘಟನೆಗಳ ಎಚ್ಚರಿಕೆ"