ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಮಾಣಿ ಕ್ಷೇತ್ರದ ನಿರ್ದೇಶಕ ನೇಮಿರಾಜ ರೈ ಹಾಗೂ ಉಪಾಧ್ಯಕ್ಷರಾಗಿ ತುಂಬೆ ಕ್ಷೇತ್ರದ ನಿರ್ದೇಶಕ ವಿಠಲ ಸಾಲ್ಯಾನ್ ಅವಿರೋಧವಾಗಿ ಗುರುವಾರ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಉಪಾಧ್ಯಕ್ಷರನ್ನು ಬಿಜೆಪಿ ಪ್ರಮುಖರು ಮಾಲಾರ್ಪಣೆ ಮಾಡಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ , ತಾ.ಪಂ.ಸದಸ್ಯ ಗಣೇಶ್ ಸುವರ್ಣ, ಪುರಸಭಾ ಸದಸ್ಯ ಗೋವಿಂದ ಪ್ರಭು, ಪ್ರಮುಖರಾದ ಸಂತೋಷ್‌ಕುಮಾರ್ ರೈ ಬೋಳಿಯಾರ್, ಚಂದ್ರಶೇಖರ ಉಚ್ಚಿಲ್, ನವೀನ್ ಪೂಜಾರಿ ಪಾದಲ್ಪಾಡಿ, ದಿನೇಶ್ ಅಮ್ಟೂರು, ವಿಜಯ ರೈ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಆನಂದ ಎ.ಶಂಭೂರು, ಮನೋಜ್ ಆಚಾರ್ಯ ನಾಣ್ಯ, ಜಯಶ್ರೀ ಕರ್ಕೇರ, ಯಶವಂತ ಅಮೀನ್, ದಿನೇಶ್ ಶೆಟ್ಟಿ ಕೊಟ್ಟಿಂಜ, ಸುಬ್ರಹ್ಮಣ್ಯ ಭಟ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಪುರುಷೋತ್ತಮ ಪೂಜಾರಿ ಮೊದಲಾದವರಿದ್ದರು.
ಕೈಕುಂಜೆಯಲ್ಲಿರುವ ಎಪಿಎಂಸಿ ಕಚೇರಿಯಲ್ಲಿ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. 2017ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 13ರಲ್ಲಿ ಬಿಜೆಪಿ 7, ಕಾಂಗ್ರೆಸ್ ಬೆಂಬಲಿತರು 6 ಸ್ಥಾನಗಳಲ್ಲಿ ಜಯಗಳಿಸಿದ್ದರು.
ಆಗ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾರಣ, ನಾಮನಿರ್ದೇಶಿತರಾಗಿದ್ದ ಕಾಂಗ್ರೆಸ್ ಬೆಂಬಲಿಗ ನಿರ್ದೇಶಕರ ಬಲದಿಂದ ಪದ್ಮನಾಭ ರೈ ಅಧ್ಯಕ್ಷರಾಗಿ, ಚಂದ್ರಶೇಖರ ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಈಗ ಬಿಜೆಪಿ ಬೆಂಬಲಿತರಾದ ತನಿಯಪ್ಪ ಗೌಡ ಮಾಣಿ, ವಸಂತ ಅಣ್ಣಳಿಕೆ ಹಾಗೂ ರೇಣುಕಾ ವಿಜಯ ರೈ ಅವರು ಎಂಪಿಎಂಸಿಗೆ ನಾಮನಿರ್ದೇಶಕರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅಧಿಕಾರ ಬಿಜೆಪಿ ಪಾಲಾಗಿದೆ.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್.ಅವರು ಚುನಾವಣೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಎಪಿಎಂಸಿ ನೂತನ ಅಧ್ಯಕ್ಷ ನೇಮಿರಾಜ ರೈ ಅವರು, ಮೆಲ್ಕಾರ್‌ನಲ್ಲಿ ಮೀಸಲಿರಿಸಲಾದ 7 ಎಕರೆ ಜಾಗದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಈ ಬಾರಿ ಎಪಿಎಂಸಿ ಯಾರ್ಡ್ ನಿರ್ಮಾಣ ನಮ್ಮ ಪ್ರಮುಖ ಗುರಿಯಾಗಿದೆ. ಯಾರ್ಡ್ ಮೂಲಕ ರೈತರಿಗೆ ಅನುಕೂವಾಗುವ ಕೆಲಸ ಮಾಡುವ ಜತೆಗೆ ಚೀಟಿ ವ್ಯವಹಾರ ಸೇರಿದಂತೆ ರೈತರಿಗೆ ಆಗುವ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ ಎಂದರು.
Be the first to comment on "ಬಂಟ್ವಾಳ ಎಪಿಎಂಸಿ ಬಿಜೆಪಿ ತೆಕ್ಕೆಗೆ: ನೇಮಿರಾಜ ರೈ ಅಧ್ಯಕ್ಷ, ವಿಠಲ ಸಾಲ್ಯಾನ್ ಉಪಾಧ್ಯಕ್ಷ"