ಸಾಂಕ್ರಾಮಿಕ ರೋಗಗಳ ತಡೆಗೆ ಜಾಗೃತಿಯೊಂದೇ ಪ್ರಬಲವಾದ ಮದ್ದು ಎಂದು ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಜಯರಾಮ್ ಪೂಜಾರಿ ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ -ಬಾಳ್ತಿಲ ಹಾಗೂ ನರಿಕೊಂಬು ಗ್ರಾಮ ಪಂಚಾಯತ್ ನ ಆಶ್ರಯದಲ್ಲಿ ನರಿಕೊಂಬು ವೀರಮಾರುತಿ ಭಜನಾಮಂದಿರದ ಬಳಿಯಲ್ಲಿ ಸೋಮವಾರ ನಡೆದ ಮಲೇರಿಯಾ ಮಾಸಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತಿದ್ದರು.
ಮಳೆಗಾಲದಲ್ಲಿ ಸೊಳ್ಳೆಗಳಿಂದಾಗಿ ಮಲೇರಿಯಾ ಹಾಗೂ ಡೆಂಗ್ಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದರು. ಸಾಂಕ್ರಾಮಿಕ ರೋಗಗಳ ವಿರುದ್ದ ಸ್ವಚ್ಛತೆಯೊಂದಿಗೆ ಹೋರಾಡಬೇಕು, ಸಣ್ಣ ಪುಟ್ಟ ಜ್ವರ ಬಂದಾಗ ನಿರ್ಲಕ್ಷ್ಯ ಮಾಡದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತಪರೀಕ್ಷೆ ಮಾಡಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮವನ್ನು ಸಂಯೋಜಿಸಿದ್ದ ಕಲ್ಲಡ್ಕ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ವೀರೇಶ್ ಮಾತನಾಡಿ, ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸುವುದರ ಜೊತೆಯಲ್ಲಿ ಪ್ರತಿಯೊಬ್ಬರೂ ಸ್ವಯಂ ಜಾಗೃತಿಯನ್ನು ಹೊಂದುವಂತೆ ಕರೆ ನೀಡಿದರು.
ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ತಾಲೂಕು ಪಂಚಾಯತ್ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜಾಥಾಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ದಿವಾಕರ ಶಂಭೂರು, ವೀರಮಾರುತಿ ಯುವಕ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ, ಕಲ್ಲಡ್ಕ ಬಾಳ್ತಿಲ ಪ್ರಾ.ಆರೋಗ್ಯ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮರಿಯಾ ಕುಟ್ಟಿ ಉಪಸ್ಥಿತರಿದ್ದರು. ಜಾಥಾದಲ್ಲಿ ಭಾಗವಹಿಸಿದ್ದ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವೀರಮಾರುತಿ ಯುವಕ ಸಂಘದ ಸದಸ್ಯರು ಮನೆಭೇಟಿ ನಡೆಸುವ ಮೂಲಕ ಮಲೇರಿಯಾ ಕುರಿತು ಮಾಹಿತಿಯೊಂದಿಗೆ ಜಾಗೃತಿ ಮೂಡಿಸಿದರು.
Be the first to comment on "ಕೊರೊನಾ ಮಾತ್ರವಲ್ಲ, ಮಲೇರಿಯಾದ ಕುರಿತೂ ಎಚ್ಚರ ಇರಲಿ"