ಪಾಣೆಮಂಗಳೂರಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ರಕ್ಷಣೆಗೆ ಮುಂದಾದ ಗೂಡಿನಬಳಿಯ ಯುವಕರ ಶೌರ್ಯವನ್ನು ಗೌರವಿಸಿ ಕೇಂದ್ರ ಸರಕಾರದಿಂದ ಕೊಡಲಾಗುವ ಜೀವನ್ ರಕ್ಷಾ ಪದಕ್ ಪ್ರಶಸ್ತಿಗೆ ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ.
ಪಕ್ಷದ ದ.ಕ.ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಬುಧವಾರ ಮೆಲ್ಕಾರ್ ಸಮೀಪದ ಬೋಳಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಜೀವವನ್ನು ಪಣಕ್ಕಿಟ್ಟು ಯುವಕರ ತಂಡ ಈ ಹಿಂದೆಯೂ ಹಲವು ಜೀವಗಳನ್ನು ರಕ್ಷಿಸಿದ್ದು, ಆದರೆ ಸರಕಾರವಾಗಲಿ, ಜಿಲ್ಲಾ-ತಾಲೂಕು ಆಡಳಿತವಾಗಲಿ ಗುರುತಿಸುವ ಕಾರ್ಯ ಮಾಡದೇ ಇರುವುದು ಬೇಸರದ ವಿಚಾರ. ಮುಂದಿನ ದಿನಗಳಲ್ಲಿ ಪಕ್ಷವು ಈ ನಿಟ್ಟಿನಲ್ಲಿ ಹೋರಾಟ ಮಾಡಲಿದೆ ಎಂದರು. ಈ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಆರೋಪ, ಪ್ರತ್ಯಾರೋಪದ ಹೇಳಿಕೆಗಳನ್ನು ರಾಜಕೀಯ ಪಕ್ಷಗಳು ನೀಡಿದ್ದು, ಅದನ್ನು ಪಕ್ಷ ಖಂಡಿಸುತ್ತದೆ. ಇವರು ಜನಪ್ರತಿನಿಧಿಗಳ ನೆಲೆಯಲ್ಲಿ ಸಾಹಸಿಗಳಿಗೆ ಪ್ರಶಸ್ತಿ ನೀಡುವಂತೆ ಸರಕಾರಕ್ಕೆ ಶಿಫಾರಸು ಮಾಡಬೇಕಿತ್ತು ಎಂದರು. ಕಲ್ಲಡ್ಕದ ಮೃತ ಯುವಕ ನಿಶಾಂತ್ ಮನೆಗೆ ಪಕ್ಷದ ನಿಯೋಗ ತೆರಳಿದ್ದು, ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ನೆರವು ನೀಡಬೇಕು, ಇಂಥ ಆತ್ಮಹತ್ಯೆಗಳು ನಿಲ್ಲಬೇಕು ಎಂದವರು ಒತ್ತಾಯಿಸಿದರು.
ಸಂಜೀವಿನಿ ಪ್ರಶಸ್ತಿ ಪ್ರದಾನ: ಇದೇ ವೇಳೆ ಮಹಮ್ಮದ್, ಝಾಹೀದ್, ತೌಸೀಫ್, ಸಮೀರ್, ಆರಿಫ್ ಪಿ.ಜೆ, ಮುಖ್ತಾರ್ ಅವರಿಗೆ ಪಕ್ಷದ ವತಿಯಿಂದ ಸಂಜೀವಿನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪಕ್ಷದ ನಾನಾ ವಿಭಾಗಗಳ ನಾಯಕರಾದ ಎಸ್.ಎಂ.ಮುತಾಲಿಬ್, ಮೊಯಿನ್ ಕಮರ್, ಶ್ರೀಕಾಂತ್ ಸಾಲ್ಯಾನ್, ದಿವಾಕರ್ ಬೋಳೂರು, ತಫ್ಲೀಲ್ ಯು ಅಭಿನಂದಿಸಿ ಮಾತನಾಡಿದರು. ಸತ್ತಾರ್ ಗೂಡಿನಬಳಿ ಉಪಸ್ಥಿತರಿದ್ದರು. ಸಲೀಂ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನೇತ್ರಾವತಿ ಜೀವರಕ್ಷಕರಿಗೆ ಜೀವನ್ ರಕ್ಷಾ ಪದಕ್ ಪ್ರಶಸ್ತಿಗೆ ಶಿಫಾರಸು ಮಾಡಿ: ಆಡಳಿತಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಒತ್ತಾಯ"