ಬಿ.ಸಿ.ರೋಡು-ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿಯ ವೇಳೆ ಮಯ್ಯರಬೈಲು ಎಂಬಲ್ಲಿ ಸ್ಥಳೀಯ ನಿವಾಸಿ ಉದಯ ಕುಮಾರ್ ರಾವ್ ಮಂಗಳವಾರ ತಮ್ಮ ಮನೆಯ ಮುಂದೆ ತೆಗೆದ ಚರಂಡಿಗೆ ಮೋರಿ ಹಾಕಿಲ್ಲ ಎಂದು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು. ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು.
ಮೇ 17ರ ತಡರಾತ್ರಿ ಸುರಿದ ಮಳೆಗೆ ಮಯ್ಯರಬಲು ನಿವಾಸಿ ಉದಯಕುಮಾರ್ ರಾವ್ ಮನೆಯ ಆವರಣಕ್ಕೆ ನೀರು ಹಾಗೂ ಮಣ್ಣು ಕೊಚ್ಚಿಕೊಂಡು ಬಂದಿತ್ತು. ಡೆಕೋರೇಶನ್ ವೃತ್ತಿ ನಿರ್ವಹಿಸುವ ಅವರ ಡೆಕೋರೇಶನ್ ಸೊತ್ತುಗಳಿಗೂ ಇದರಿಂದ ಹಾನಿಯಾಗಿತ್ತು. ಅವರು ಚರಂಡಿ ಅಗೆದು ಮೋರಿ ಅಳವಡಿಸಬೇಕು ಎಂದು ಒತ್ತಡ ಹಾಕಿದ ಪರಿಣಾಮ ಕಾಮಗಾರಿ ನಿರ್ವಹಿಸುವ ಸಂಸ್ಥೆಯವರು ಕೇವಲ ಚರಂಡಿ ತೆಗೆದು ಹೋಗಿದ್ದರು. ಉದಯಕುಮಾರ್ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಹೀಗಾಗಿ ಅವರಿಗೆ ನಡೆದುಕೊಂಡು ಹೋಗುವುದಕ್ಕೆ ಕಷ್ಟವಾಗುತ್ತಿದೆ. ಮಂಗಳವಾರ ವೈದ್ಯರ ಬಳಿ ಹೋಗಿ ಹಿಂದುರುಗಿದ ಅವರು ಮೋರಿ ಹಾಕದೆ ಮನೆಗೆ ಹೋಗುವುದಿಲ್ಲ ಎಂದು ರಸ್ತೆಯಲ್ಲೇ ಕುರ್ಚಿ ಹಾಕಿ ಕುಳಿದರು. ಈ ವಿಚಾರ ಪೊಲೀಸರಿಗೆ ತಿಳಿದು ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಮೋರಿ ಹಾಕುವಂತೆ ಕಾಮಗಾರಿ ನಡೆಸುವವರಿಗೆ ಸೂಚಿಸಿದ ಬಳಿಕ ಮೋರಿ ಅಳವಡಿಸಲಾಯಿತು.
Be the first to comment on "ಕಾಮಗಾರಿ ಆವಾಂತರ: ಹೆದ್ದಾರಿಯಲ್ಲೇ ಕುರ್ಚಿ ಹಾಕಿ ಕುಳಿತು ಪ್ರತಿಭಟನೆ"