ಬಂಟ್ವಾಳ ಪುರಸಭೆ ವ್ಯಾಪ್ತಿಯ ಸೀಲ್ ಡೌನ್ ಪ್ರದೇಶದ ಜನರಿಗೆ ತೆರಿಗೆ ಶುಲ್ಕ ಮನ್ನಾ ಮಾಡುವಂತೆ ಒತ್ತಾಯಿಸಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನಿಯೋಗ ಅಧ್ಯಕ್ಷ ಬೇಬಿ ಕುಂದರ್ ನೇತೃತ್ವದಲ್ಲಿ ಇಂದು ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ನಿವಾಸಿಗಳ ಬದುಕು ಸೀಲ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿದ್ದು, ಈ ಹಿನ್ನೆಲೆಯಲ್ಲಿ ಆ ನಿವಾಸಿಗಳ ಕಟ್ಟಡ, ಮನೆ ತೆರಿಗೆ, ವಿದ್ಯುತ್ ಮತ್ತು ನೀರಿನ ಬಿಲ್ ಹಾಗೂ ತ್ಯಾಜ್ಯ ಶುಲ್ಕವನ್ನು ಮನ್ನಾ ಮಾಡುವಂತೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ನೇತೃತ್ವದಲ್ಲಿ ಈ ಕುರಿತು ನಿಯೋಗವೊಂದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರಿಗೆ ಮೇ.15ರಂದು ಮನವಿ ಸಲ್ಲಿಸಿತು. ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತರ ಸುದೀರ್ಘ ದಿನಗಳ ಸೀಲ್ ಡೌನ್ ಮುಂದುವರಿದಿದೆ. ಆದರೆ ಈ ಪ್ರದೇಶದ ಜನರಿಗೆ ಯಾವುದೇ ಮೂಲಸೌಲಭ್ಯಗಳು ದೊರೆತಿಲ್ಲ. ಇದರಿಂದಾಗಿ ಇಲ್ಲಿನ ಜನರಿಗೆ ದಿನನಿತ್ಯದ ಬದುಕು ನಿರ್ವಹಣೆಯೇ ಕಷ್ಟವಾಗಿದೆ. ಈ ಸಂದರ್ಭ ಇಲ್ಲಿನ ನಿವಾಸಿಗಳ ಕಟ್ಟಡ, ಮನೆ ತೆರಿಗೆ, ವಿದ್ಯುತ್ ಮತ್ತು ನೀರಿನ ಬಿಲ್ ಹಾಗೂ ತ್ಯಾಜ್ಯ ಶುಲ್ಕವನ್ನು ಮನ್ನಾ ಮಾಡುವ ಮೂಲಕ ಪುರಸಭೆಯು ಇವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಬೇಬಿ ಕುಂದರ್ ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯರಾದ ಜನಾರ್ದನ ಚೆಂಡ್ತಿಮಾರ್, ಗಂಗಾಧರ ಪೂಜಾರಿ ಉಪಸ್ಥಿತರಿದ್ದರು.
Be the first to comment on "ಸೀಲ್ ಡೌನ್ ನಿವಾಸಿಗಳ ಕಟ್ಟಡ, ಮನೆ ತೆರಿಗೆ, ಬಿಲ್ ಮನ್ನಾ ಮಾಡುವಂತೆ ಕಾಂಗ್ರೆಸ್ ಒತ್ತಾಯ"