You can view more news by joining this watsapp group
https://chat.whatsapp.com/GX45mPIvBYmC0f8LI6Ytsf
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಾ ಪ್ರಕರಣಗಳ ಮೂಲವನ್ನು ಪತ್ತೆ ಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಮೂರು ಕೋರೋನಾ ಪ್ರಕರಣಗಳ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತದೊಂದಿಗೆ ತುರ್ತು ಸಭೆ ನಡೆಸಿದ ಅವರು ಈ ಸೂಚನೆ ನೀಡಿದರು.
ಈ ಬಗ್ಗೆ ಸಮಗ್ರ ತನಿಖೆ ವಿಚಾರಣೆ ನಡೆಸಿ ಸರಕಾರಕ್ಕೆ ವರದಿ ನೀಡಬೇಕು ಎಂದ ಅವರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ ನೀಡಿದರು.ಸೋಂಕಿನ ಮೂಲ ತನಿಖೆಗೆ ಉನ್ನತ ಉನ್ನತ ವೈದ್ಯಕೀಯ ತಂಡದ ನೆರವಿನೊಂದಿಗೆ ಸಮಗ್ರ ವರದಿಯನ್ನು ತಯಾರಿಸಿ ಸರಕಾರಕ್ಕೆ ಮಂಡಿಸಬೇಕೆಂದು ಅವರು ನಿರ್ದೇಶಿಸಿದರು.ಇದರಿಂದ ಕೋರೋನಾ ಎಲ್ಲಿಂದ ಆರಂಭವಾಯಿತು ಎಂಬ ಸಾರ್ವಜನಿಕ ಸಂಶಯ ನಿವಾರಣೆಯಾಗಲು ಸಾಧ್ಯವಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಮಾತನಾಡಿ ಫಸ್ಟ್ ನ್ಯೂರೋ ಆಸ್ಪತ್ರೆಯ ವಿವಿಧ ರೋಗಿಗಳ ಸಂಪರ್ಕವನ್ನು ಈಗಾಗಲೇ ಪಡೆಯಲಾಗಿದೆ. ಈ ಬಗ್ಗೆ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಪ್ರಯೋಗಾಲಯ ಸ್ಥಗಿತಗೊಂಡಿಲ್ಲ:
ವೆನ್ಲಾಕ್ ಕೋರೋನಾ ಪ್ರಯೋಗಾಲಯದ ಬಗ್ಗೆ ಮಾಹಿತಿ ಒದಗಿಸಿದ ಜಿಲ್ಲಾ ಆರೋಗ್ಯಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಪ್ರಕರಣಗಳ ಬರುತ್ತಿರುವ ಹಿನ್ನೆಲೆಯಲ್ಲಿ ವರದಿ ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ಪ್ರಯೋಗಾಲಯದ ಕಾರ್ಯಾಚರಣೆ ಸ್ಥಗಿತವಾಗಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವ ಕೋಟ, ಕೋರೋನಾ ನಿಯಂತ್ರಿಸಲು ಎಲ್ಲರೂ ಸಹಕಾರ ನೀಡಬೇಕು, ರಾಜಕೀಯಕ್ಕೆ ಇದನ್ನು ಬಳಸದಂತೆ ವಿನಂತಿಸಿದರು.
ಬಟ್ಟೆಯಂಗಡಿ ಓಪನ್
ಸಾರ್ವಜನಿಕರ ಬೇಡಿಕೆ ಮೇರೆಗೆ ಜಿಲ್ಲೆಯಲ್ಲಿ ಗುರುವಾರದಿಂದ ಎಲ್ಲಾ ರೀತಿಯ ವಸ್ತ್ರದ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು..
ಈ ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ರೂಂಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಆದರೆ ಮಾಲ್ ಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ವಲಸೆ ಕಾರ್ಮಿಕರಿಗೆ ಉಚಿತ ಬಸ್: ಗುರುವಾರ ಕೊನೆಯ ದಿನ
ಜಿಲ್ಲೆಯಲ್ಲಿ ಇದುವರೆಗೆ ವಲಸೆ ಕಾರ್ಮಿಕರನ್ನು 433 ಬಸ್ಸುಗಳಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಉಚಿತವಾಗಿ ಹೊರ ಜಿಲ್ಲೆಗೆ ಪ್ರಯಾಣಿಸಲು ಗುರುವಾರ (ಮೇ 7) ಕೊನೆಯ ದಿನವಾಗಿದ್ದು , ಎಲ್ಲಾ ವಲಸೆ ಕಾರ್ಮಿಕರನ್ನು ಮಂಗಳೂರು ಲಾಲ್ ಭಾಗ್ ಕೆ.ಎಸ್. ಆರ್. ಟಿ. ಸಿ ಬಸ್ ನಿಲ್ದಾಣದಿಂದ ಹೊರ ಜಿಲ್ಲೆಗೆ ಪ್ರಯಾಣ ಮಾಡಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ವಿವಾಹ: ಅಂತರ್ಜಿಲ್ಲಾ ಪಾಸು
ಜಿಲ್ಲೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸುವವರಿಗಾಗಿ ಅಂತರ ಜಿಲ್ಲೆ ಪ್ರಯಾಣಿಸುವ ಟೂ ವೇ ಪಾಸ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಾಹ ಕಾರ್ಯಕ್ರಮಕ್ಕೆ ಗರಿಷ್ಠ 25 ಜನರಿಗೆ ಸೀಮಿತಗೊಳಿಸಿ ನಡೆಸಲು ಸಭೆಯಲ್ಲಿ ಸೂಚಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಮುಂದಿನ ದಿನಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಬರುವ ಅನಿವಾರ್ಯತೆ ಇದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಎಸ್ಪಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ರೂಪಾ, ಮತ್ತಿತರರು ಇದ್ದರು.
Be the first to comment on "ಜಿಲ್ಲೆಯ ಕೊರೊನಾ ಸೋಂಕು ಮೂಲ ಪತ್ತೆ ಹಚ್ಚಿ: ಸಚಿವ ಕೋಟ ಸೂಚನೆ"