ಏನಿದು ಪ್ಲಾಸ್ಮಾಥೆರಪಿ? ಕೋವಿಡ್ 19ಗೂ ಇದಕ್ಕೂ ಏನು ಸಂಬಂಧ?

ಕೋವಿಡ್ 19 ವೈರಾಣು ಚಿಕಿತ್ಸೆಯಲ್ಲಿ ಕೇಳಿಬರುತ್ತಿರುವ ಪ್ಲಾಸ್ಮಾ ಥೆರಪಿ ಕುರಿತು ಡಾ. ಮುರಲೀ ಮೋಹನ ಚೂಂತಾರು ಹೀಗೆ ಬರೆಯುತ್ತಾರೆ.

ಇತ್ತೀಚಿನ ದಿನಗಳಲ್ಲಿ  ಬಹಳಷ್ಟು ಧೂಳೆಬ್ಬಿಸುತ್ತಾ ಮರಣ ಮೃದಂಗ  ಬಾರಿಸುತ್ತಿರುವ ಕೋವಿಡ್-19 ವೈರಾಣುವಿನ ಚಿಕಿತ್ಸೆಯಲ್ಲಿ ಕೇಳಿಬರುತ್ತಿರುವ  ಹೊಸದಾದ ಚಿಕಿತ್ಸೆ ಪ್ಲಾಸ್ಮಾಥೆರಪಿ ಡಿಸೆಂಬರ್ 2019 ರಲ್ಲಿ ಚೀನಾ  ದೇಶದ ವುಹಾನ್ ನಗರದಲ್ಲಿ ಆರಂಭವಾದ ಈ ಕೊರೋನಾ  ವೈರಾಣು ಜ್ವರ ಏಪ್ರಿಲ್ 2020 ರ ಮೊದಲ  ವಾರದಲ್ಲಿ ಸುಮಾರು 210 ದೇಶಗಳಲ್ಲಿ  ತನ್ನ ಕದಂಬಬಾಹುಗಳನ್ನು ವಿಸ್ತರಿಸಿ  ಮನುಕುಲದ ಮೇಲೆ  ಸವಾರಿ ಮಾಡುತ್ತಿದೆ. ವಿಶ್ವದಾದ್ಯಂತ ಸುಮಾರು 20 ಲಕ್ಷಕ್ಕೂ ಹೆಚ್ಚು ಮಂದಿ  ಈ ರೋಗದಿಂದ  ಸೋಂಕಿತರಾಗಿದ್ದು, 1 ಲಕ್ಷ 35 ಸಾವಿರ ಮಂದಿ  ಸಾವಿಗಿಡಾಗಿದ್ದಾರೆ. ಭಾರತ ದೇಶದಲ್ಲಿ ಸೋಂಕಿತರ ಸಂಖ್ಯೆ  12 ಸಾವಿರ ದಾಟಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿವೆ. ಮೃತರ  ಸಂಖ್ಯೆ 400 ನ್ನು ದಾಟಿರುತ್ತದೆ. ಜಗತ್ತಿನ ಹಿರಿಯಣ್ಣ ಅಮೇರಿಕಾ ದೇಶವೊಂದರಲ್ಲಿಯೇ 6.5 ಲಕ್ಷ ಮಂದಿ  ಸೋಂಕಿತರಿದ್ದು, ಸತ್ತವರ ಸಂಖ್ಯೆ 25000 ದಾಟಿದೆ.  ಇದೇ  ವೇಗದಲ್ಲಿ  ಮುಂದುವರಿದರೆ,  ಮುಂದಿನ  ಒಂದು ವಾರದಲ್ಲಿ  ಅಮೇರಿಕಾ ದೇಶದಲ್ಲಿ  ಮೃತರ ಸಂಖ್ಯೆ  ಒಂದು ಲಕ್ಷ  ತಲುಪುತ್ತದೆ ಎಂದೂ  ಅಂದಾಜಿಸಲಾಗಿದೆ.  ಕರೋನಾ ಜ್ವರದ ಆರ್ಭಟಕ್ಕೆ ಅಮೇರಿಕಾ, ಇಟೆಲಿ, ಸ್ಪೇನ್, ಇಂಗ್ಲೆಂಡ್, ಚೀನಾ ಮುಂತಾದ ದೇಶಗಳೇ  ಮಕಾಡೆ ಮಲಗಿದೆ. ಭಾರತ ದೇಶ ಕೂಡಾ ರೋಗಾಣುವಿನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಜನರು, ವೈದ್ಯರು, ದಾದಿಯರು, ಶುಶ್ರೂಷಕಿಯರೂ  ಹೈರಾಣಾಗಿದ್ದಾರೆ. ಇಡೀ  ವಿಶ್ವವೇ  ವೈರಾಣುವಿನ  ರುದ್ರ ನರ್ತನೆಗೆ ಕಂಗಾಲಾಗಿ ಹೋಗಿದ್ದಾರೆ. ಜಗತ್ತೇ  ಸ್ತಬ್ಧವಾಗಿದೆ.

ಏನಿದು ಪ್ಲಾಸ್ಮಾ ಥೆರಪಿ?

ಇದೊಂದು ಹೊಸ ರೀತಿಯ ಚಿಕಿತ್ಸೆಯಾಗಿದ್ದು, ಕರೋನಾ ಪೀಡಿತ ರೋಗಿಗಳಿಗೆ  ಈ ಚಿಕಿತ್ಸೆ ನೀಡಿ ಒಂದಷ್ಟು ಯಶಸ್ಸು ಪಡೆದಿರುವ ಉದಾಹರಣೆ  ನಮ್ಮ ಮುಂದೆ ಇದೆ.  ನಮ್ಮ ದೇಹದ ರಕ್ತನಾಳಗಳಲ್ಲಿ  ಹರಿಯುವ ರಕ್ತದಲ್ಲಿ ಪ್ಲಾಸ್ಮಾ ಮತ್ತು ರಕ್ತಕಣಗಳು ಇರುತ್ತದೆ.  ಈ ರಕ್ತದಿಂದ ರಕ್ತಕಣಗಳೂ ಬೇರ್ಪಡಿಸಿದಾಗ ಸಿಗುವ ದ್ರವವೇ ಪ್ಲಾಸ್ಮಾ ಆಗಿರುತ್ತದೆ. ಈ ಪ್ಲಾಸ್ಮಾದಲ್ಲಿ ಸಾಕಷ್ಟು ಆಂಟಿಬಾಡಿಗಳು ಇರುತ್ತದೆ. ಒಬ್ಬ  ವ್ಯಕ್ತಿಯ  ದೇಹಕ್ಕೆ ವೈರಾಣು  ಸೇರಿಕೊಂಡಾಗ ಅದು ಸಹಜವಾಗಿಯೇ ರಕ್ತಕ್ಕೆ ಸೇರಿಕೊಳ್ಳುತ್ತಾರೆ. ರಕ್ತಕ್ಕೆ  ಯಾವುದೇ  ಹೊರಗಿನ ಅಪರಿಚಿತ  ವೈರಾಣು ಬಂದಾಗ  ದೇಹದ  ರಕ್ಷಣಾ  ವ್ಯವಸ್ಥೆ ಚುರುಕಾಗುತ್ತದೆ.  ನಮ್ಮ  ದೇಹದಲ್ಲಿ ರಕ್ಷಣಾ ವ್ಯವಸ್ಥೆಯ ಸೈನಿಕರಾದ ಲಿಂಪೊಸೈಟ್ ಎಂಬ ಬಿಳಿ ರಕ್ತಕಣಗಳು ಇದೆ.  ದೇಹದೊಳಗೆ  ರಕ್ತಕ್ಕೆ ಯಾವುದೇ ವೈರಾಣು  ಸೇರಿದಾಗ  ಆ ವೈರಾಣುವಿನ ವಿರುದ್ಧ ಈ ಬಿ-ಲಿಂಪೊಸೈಟ್‌ಗಳು ಆಂಟಿಬಾಡಿಗಳನ್ನು  ಉತ್ಪಾದಿಸಿ, ವೈರಾಣುವಿನ ವಿರುದ್ಧ ಹೋರಾಡುತ್ತದೆ. ಇದೊಂದು ನಮ್ಮ ದೇಹದ ನೈಸರ್ಗಿಕವಾದ ರಕ್ಷಣಾ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯನೂ ಇದೇ ರೀತಿ ಪ್ರತಿಕ್ರಿಯಿಸುತ್ತಾರೆ.

ಕೋವಿಡ್-19 ಮತ್ತು ಪ್ಲಾಸ್ಮಾ ಥೆರಪಿ

ಒಬ್ಬ ವ್ಯಕ್ತಿಗೆ ಕೋವಿಡ್-19 ವೈರಾಣು ಜ್ವರ  ಬಂದಾಗ 80 ಶೇಕಡಾ ಮಂದಿ ಚೇತರಿಸಿಕೊಳ್ಳುತ್ತಾರೆ. ಅಂತಹಾ ಗುಣಮುಖರಾದ ಕೋವಿಡ್ ಸೋಂಕಿತ ರೋಗಿಗಳ ರಕ್ತದಲ್ಲಿ ಕೋವಿಡ್-೧೯ ವೈರಾಣುಗಳ ವಿರುದ್ಧ ಆಂಟಿಬಾಡಿಗಳು ಉತ್ಪತ್ತಿಯಾಗಿರುತ್ತದೆ. ಮಗದೊಮ್ಮೆ ಪುನ: ಅದೇ ವೈರಾಣು ಅದೇ ವ್ಯಕ್ತಿಯ  ಮೇಲೆ  ದಾಳಿ ಮಾಡಿದಾಗ ರಕ್ಷಣೆ ಪಡೆಯುವ ಉದ್ದೇಶದಿಂದ ಆತನ  ದೇಹ ಈ ರೀತಿ ಸಿದ್ಧತೆ  ಮಾಡಿಕೊಂಡಿರುತ್ತದೆ. ಇಂತಹ ವ್ಯಕ್ತಿಗಳ ರಕ್ತವನ್ನು ತೆಗೆದು ರಕ್ತದಿಂದ  ಪ್ಲಾಸ್ಮಾ ಭಾಗವನ್ನು ಬೇರ್ಪಡಿಸಿದ  ಪ್ಲಾಸ್ಮಾವನ್ನು ಕೋವಿಡ್-19 ಸೋಂಕಿತ  ರೋಗಿಗೆ ನೀಡಿ  ಆತ  ರೋಗದಿಂದ  ಗುಣಮುಖನಾಗುವಂತೆ ಮಾಡುತ್ತದೆ. ಒಬ್ಬ ವ್ಯಕ್ತಿಯಿಂದ  ತೆಗೆದು ಪ್ಲಾಸ್ಮಾವನ್ನು ಸಾಮಾನ್ಯವಾಗಿ ಎರಡು ಸೋಂಕಿತ ರೋಗಿಗಳಿಗೆ ಕೊಡಲು ಸಾಧ್ಯವಿದೆ. ವಿಜ್ಞಾನಿಗಳ ಪ್ರಕಾರ  ಒಬ್ಬ ಸೋಂಕಿತ ವ್ಯಕ್ತಿಗೆ ಒಂದು ಬಾರಿ ಮಾತ್ರ ಈ ರೀತಿಯ ಪ್ಲಾಸ್ಮಾ ಥೆರಪಿಯ ಅಗತ್ಯವಿರುತ್ತದೆ. ಒಂದು  ಯುನಿಟ್  ಪ್ಲಾಸ್ಮಾ ದಲ್ಲಿ ಸಾಕಷ್ಟು ಆಂಟಿಬಾಡಿಗಳು ಇರುತ್ತದೆ ಮತ್ತು ಆ ವ್ಯಕ್ತಿಯ ರಕ್ತಣೆಗೆ ಅದು ಸಹಕಾರ ನೀಡುತ್ತದೆ ಎಂದು ಹೇಳಲಾಗಿದೆ. ಈ ಹಿಂದೆ  ಇದಧೇ ಕೊರೋನಾ ವೈರಾಣು ಸಾರ್ಸ್ ಎಂಬ ರೋಗಕ್ಕೆ ಕಾರಣವಾಗಿತ್ತು. ಬಹಳಷ್ಟು ಮಂದಿ ಈ ರೋಗದಿಂದ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಈ ರೀತಿಯ ಪ್ಲಾಸ್ಮಾ ಥೆರಪಿ ಮಾಡಿ ಒಂದಷ್ಟು ಜೀವಗಳನ್ನು ಉಳಿಸಿಕೊಳ್ಳಲಾಗಿತ್ತು. ಇದೇ  ಚಿಕಿತ್ಸೆಯನ್ನು ಈ  ಕರೋನಾ  ಜ್ವರದ  ಕೋವಿಡ್-19 ರೋಗದ  ಚಿಕಿತ್ಸೆಗೂ  ಬಳಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಇದರ ಸೌಲಭ್ಯ ಇಲ್ಲದಿರುವುದು ದೌರ್ಭಾಗ್ಯದ  ವಿಚಾರ. ದಿಲ್ಲಿ, ಗುಜರಾತ್, ಕೇರಳ, ಮಹಾರಾಷ್ಟ್ರ ಮುಂತಾದ ರಾಜ್ಯಗಳು ಈ ಚಿಕಿತ್ಸೆ ಮಾಡಲು ನಿಯಂತ್ರಣ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿದೆ.

ಯಾರು ನೀಡಬಹುದು

ಒಬ್ಬ ವ್ಯಕ್ತಿ ಕೋವಿಡ್-19 ವೈರಾಣುವಿನಿಂದ ಸೋಂಕಿತನಾಗಿ ಬಳಲಿ ಗುಣಮುಖವಾದ ಬಳಿಕ ಆತ ಕೋವಿಡ್-19 ವೈರಾಣುವಿಗೆ ಋಣಾತ್ಮಕ ವರದಿ ಪಡೆಯಬೇಕು. ಈ ವರದಿ ಪಡೆದ  ಬಳಿಕ  ಎರಡು  ವಾರಗಳ ನಂತರ ಆ ವ್ಯಕ್ತಿ ತನ್ನ ದೇಹದ ಪ್ಲಾಸ್ಮಾ ನೀಡಲು ಅರ್ಹನಾಗಿರುತ್ತಾನೆ. ಸಾಮಾನ್ಯವಾಗಿ ಋಣಾತ್ಮಕ  ವರದಿ ಬಂದು  ಎರಡು ವಾರಗಳಲ್ಲಿ  ಆತನ  ರಕ್ತದಲ್ಲಿ ಸಾಕಷ್ಟು ಆಂಟಿಬಾಡಿಗಳು ಉತ್ಪಾದನೆ ಆಗಿರುತ್ತದೆ. ಒಮ್ಮೆ ಕೋವಿಡ್-19 ರೋಗ  ಬಂದು ಗುಣಮುಖರಾದ ವ್ಯಕ್ತಿಗಳು ಮಾತ್ರ ಈ ಪ್ಲಾಸ್ಮಾ ದಾನ ಮಾಡಲು ಅರ್ಹರಾಗಿರುತ್ತದೆ.

ಈ ಕಲ್ಪನೆ ಹುಟ್ಟಿದ್ದು ಯಾವಾಗ?

’ಪ್ಲಾಸ್ಮಾಥೆರಪಿ ಕಲ್ಪನೆ  1890 ರಲ್ಲಿ ಜರ್ಮನಿಯ ಒಬ್ಬ ವೈದ್ಯ ಡಾ|| ಎಮಿಲ್‌ವಾನ್ ಬೆಹ್‌ರಿಂಗ್  ಎಂಬಾತನಿಗೆ ಹೊಳೆದಿತ್ತು. ಡಿಪ್ತೀರಿಯಾ ಸೋಂಕು ತಗಲಿದ  ಮೊಲಗಳ  ರಕ್ತದಲ್ಲಿ ಆತ ಮೊದಲಾಗಿ  ಡಿಪ್ತೀರಿಯಾ ವಿರುದ್ಧದ ಆಂಟಿಬಾಡಿಗಳನ್ನು  ಗುರುತಿಸಿದ  ಬಳಿಕ,  ಇದೇ ಆಂಟಿಬಾಡಿಗಳನ್ನು ಆತ ಇದೇ ಆಂಟಿಬಾಡಿ ಇರುವ ಪ್ಲಾಸ್ಮಾ ಬಳಸಿ ಇತರ ಮೊಲಗಳನ್ನು ಡಿಪ್ತೀರಿಯಾ ಬರದಂತೆ ತಡೆದಿದ್ದ. ಅದಕ್ಕಾಗಿ  ಆತನಿಗೆ  1901 ರಲ್ಲಿ  ವೈದ್ಯಕೀಯ  ವಿಜ್ಞಾನ ವಿಭಾಗದ ನೊಬೆಲ್ ಪ್ರಶಸ್ತಿ ದೊರಕಿತ್ತು. ಇದೇ  ತಂತ್ರಜ್ಞಾನವನ್ನು ಬಳಸಿ  ಮುಂದೆ ೧೯೧೮ರ ಸ್ಪಾನಿಷ್ ಪ್ಲೂ ರೋಗ ಬಂದಾಗ  ಮತ್ತು ೧೯೨೦ರ ಡಿಪ್ತೀರಿಯಾ ಸಾಂಕ್ರಾಮಿಕ ಸೋಂಕು ಬಂದಾಗ ಪ್ಲಾಸ್ಮಾ  ಥೆರಪಿ ಬಳಸಿ  ಒಂದಷ್ಟು ಯಶಸ್ಸು ಪಡೆಯಲಾಗಿತ್ತು. ಇತ್ತೀಚೆಗೆ  ೨೦೧೬ ರಲ್ಲಿ ಬಂದ ಎಬೋಲಾ  ರೋಗಕ್ಕೂ  ಇದೇ ಚಿಕಿತ್ಸೆ ನೀಡಲಾಗಿತ್ತು. ೨೦೧೨ ರಲ್ಲಿ ಮರ್‍ಸ್ ಎಂಬ  ರೋಗಕ್ಕೂ ಇದೇ ಪ್ರಯತ್ನ ನಡೆದಿತ್ತು. ಇತ್ತೀಚಿನ ದಿನಗಳಲ್ಲಿ ಮುಂದುವರಿದ ತಂತ್ರಜ್ಞಾನ  ಮತ್ತು ಕೌಶಲ್ಯಗಳಿಂದಾಗಿ ವೈದ್ಯರು ಹಾಗೂ ವಿಜ್ಞಾನಿಗಳು ಪ್ಲಾಸ್ಮಾ ಥೆರಪಿಯ ಅಡ್ಡ ಪರಿಣಾಮಗಳನ್ನು  ಬಹುತೇಕವಾಗಿ ಕಡಿಮೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಚಿಕಿತ್ಸೆ ಅತ್ಯಂತ ಸುರಕ್ಷಿತ ಮತ್ತು  ಪರಿಣಾಮಕಾರಿ ಎಂದೂ ತಿಳಿದು ಬಂದಿದೆ.

ಕೊನೆಮಾತು

ಪ್ಲಾಸ್ಮಾ ಥೆರಪಿ ಎನ್ನುವುದು ಪುರಾತನವಾದ ಚಿಕಿತ್ಸಾಕ್ರಮವಾಗಿದ್ದರೂ  ಈ ಚಿಕಿತ್ಸೆ ಹೆಚ್ಚು  ಬಳಸದೇ  ಇರುವ ಕಾರಣದಿಂದಾಗಿ ಹೆಚ್ಚಿನ ಯಶಸ್ಸು ದೊರೆತಿಲ್ಲ ಎಂದೂ ತಿಳಿದು ಬಂದಿದೆ. ಇತ್ತೀಚೆಗೆ ಚೀನಾದಲ್ಲಿ ಇದೇ  ಕೋವಿಡ್-೧೯ ವೈರಾಣು ಜ್ವರಕ್ಕೆ  ೧೦ ರೋಗಿಗಳಲ್ಲಿ  ಪ್ರಯೋಗಾತ್ಮಕವಾಗಿ  ಬಳಸಲಾಗಿದೆ. ಇದರಲ್ಲಿ ೭ ಮಂದಿ ಗುಣಮುಖರಾಗಿದ್ದಾರೆ ಎಂದೂ ವರದಿಗಳೂ ತಿಳಿಸಿದೆ. ಗುಣಮುಖರಾದ ರೋಗಿಯ ರಕ್ತದಿಂದ ೨೦೦mಟ ನಷ್ಟು ಪ್ಲಾಸ್ಮಾವನ್ನು ವಿಂಗಡಿಸಿ ಸೋಂಕಿತ ರೋಗಿಗೆ ನೀಡಲಾಗಿತ್ತು. ಯಾವುದೇ ರೀತಿಯ  ಅಡ್ಡಪರಿಣಾಮ ಮತ್ತು ತೊಂದರೆ ಉಂಟಾಗಲಿಲ್ಲ ಎಂದೂ  ವರದಿಗಳು ತಿಳಿಸಿವೆ. ಅದೇನೇ ಇರಲಿ  ದೊಡ್ಡ ಪ್ರಮಾಣದಲ್ಲಿ ಈ ಪರೀಕ್ಷೆ ನಡೆದು  ಹೆಚ್ಚಿನ  ರೋಗಿಗಳಲ್ಲಿ ಬಳಸಿದ ಬಳಿಕವಷ್ಟೆ ಈ ಚಿಕಿತ್ಸೆಯ ಸುರಕ್ಷಕತೆ ಮತ್ತು ಪರಿಣಾಮಕತೆ ಬಗ್ಗೆ ಪರಿಪೂರ್ಣ ಮಾಹಿತಿ ದೊರಕಬಹುದು. ಆದಷ್ಟು  ಬೇಗ ಈ ಚಿಕಿತ್ಸೆ ಬಗ್ಗೆ ಹೆಚ್ಚಿನ ಸಂಶೋಧನೆ  ನಡೆದು  ಬಳಸುವಂತಾಗಲಿ ಎಂದು ಹಾರೈಸೋಣ. ಅತ್ತ ಚಿಕಿತ್ಸೆಯೂ ಇಲ್ಲದ ಮತ್ತು ಲಸಿಕೆಯೂ ಇಲ್ಲದ ಈ ರೋಗಕ್ಕೆ  ಪ್ಲಾಸ್ಮಾ ಥೆರಪಿ ಒಂದಷ್ಟು ಆಶಾಕಿರಣ ಮೂಡಿಸಿರುವುದಂತೂ  ನಿಜವಾದ  ಮಾತು. ರೋಗಿಗೆ  ನೀಡಿದ  ಆಂಟಿಬಾಡಿಗಳು  ಒಂದಷ್ಟು  ದಿನಗಳು ಮಾತ್ರ ಆತನ ದೇಹದಲ್ಲಿ  ಇರುವ ಕಾರಣ, ಪರಿಣಾಮಕಾರಿ ಲಸಿಕೆಗಳು ಬಂದಲ್ಲಿ  ಮಾತ್ರ ನಾವು ಈ ಕೋವಿಡ್-೧೯ ರೋಗವನ್ನು  ಎದುರಿಸಲು ಸಾಧ್ಯವಿದೆ ಎಂಬ ಕಹಿ ಸತ್ಯವನ್ನು ನಾವು ಜೀರ್ಣಿಸಿಕೊಳ್ಳಲೇಬೇಕಾಗಿದೆ. ನಮ್ಮ ಭಾರತ ದೇಶದಲ್ಲಿ   ಭಾರತೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸದ್ಯಕ್ಕೆ ಕೇರಳ ರಾಜ್ಯಕ್ಕೆ  ಪ್ರಯೋಗಾತ್ಮಕವಾಗಿ  ಈ ಚಿಕಿತ್ಸೆ ಬಳಸಲು ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಧನಾತ್ಮಕ ವರದಿ ಬರಲಿ  ಎಂದೂ ತುಂಬು ಹೃದಯದಿಂದ ಹಾರೈಸೋಣ.

  • ಡಾ. ಮುರಲೀಮೋಹನ ಚೂಂತಾರು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಏನಿದು ಪ್ಲಾಸ್ಮಾಥೆರಪಿ? ಕೋವಿಡ್ 19ಗೂ ಇದಕ್ಕೂ ಏನು ಸಂಬಂಧ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*