ಬಂಟ್ವಾಳ ತಾಲೂಕಿನ ಸೂರಿಕುಮೇರು ಚರ್ಚ್ ನಲ್ಲಿ ಫಾ. ಗ್ರೆಗರಿ ಪಿರೇರ ಪಪ್ಪಾಯಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದು, ಅದೀಗ ದೂರದ ಸಂಪಾಜೆ ಚರ್ಚ್ ವರೆಗೂ ತಲುಪಿದೆ.
ಸಂಪಾಜೆಯ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ನಲ್ಲೂ ಇದೀಗ ಬೆಳೆದುನಿಂತಿರುವ ಪಪ್ಪಾಯಿ ಕೃಷಿ, ಎಲ್ಲರ ಮನಸೂರೆಗೊಳ್ಳುತ್ತಿದೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸೂರಿಕುಮೇರು ಬೊರಿಮಾರ್ ಚರ್ಚ್ ಗೆ ಬಂದಿದ್ದ ಸಂಪಾಜೆ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೋರವರು, ಸೂರಿಕುಮೇರು ಚರ್ಚ್ ನ ಧರ್ಮಗುರುಗಳಾಗಿರುವ ವಂದನೀಯ ಫಾದರ್ ಗ್ರೆಗರಿ ಪಿರೇರಾ ರ ಕೃಷಿಕ್ರಾಂತಿ ಕಂಡು ಚಕಿತರಾಗಿದ್ದರು. ಅದಾಗಲೇ ಪಪ್ಪಾಯಿ ಬೆಳೆಯ ಮೂಲಕ ಪಪ್ಪಾಯಿ ಫಾದರ್ ಎಂದೇ ಹೆಸರು ಮಾಡಿದ್ದ ಫಾದರ್ ಗ್ರೆಗರಿ ಪಿರೇರಾ ಮುತುವರ್ಜಿಯಲ್ಲಿ ಬೆಳೆಸಿದ್ದ ಸುವರ್ಣ ಗೆಡ್ಡೆ, ನುಗ್ಗೆ, ಬಸಳೆ, ಹರಿವೆ ಸೊಪ್ಪು, ಕುಂಬಳಕಾಯಿ ಬಳ್ಳಿ, ಗೆಣಸಿನ ಬಳ್ಳಿಗೆ ಮಾರುಹೋದರು. ಸಂಪಾಜೆ ಚರ್ಚ್ ನಲ್ಲೂ ಕೃಷಿಕ್ರಾಂತಿಯ ಸಂಕಲ್ಪ ತೊಟ್ಟರು.
ಅವರು ಅಂದು ಸೂರಿಕುಮೇರು ಚರ್ಚ್ ನಿಂದ ಕೊಂಡೊಯ್ದ ಪಪ್ಪಾಯಿ ಗಿಡಗಳು, ಬಸಳೆ ಬಳ್ಳಿ,ಅಲಸಂಡೆ, ಸೊಪ್ಪು ಇದೀಗ ತೋಟವಾಗಿ ಸಂಪಾಜೆ ಚರ್ಚ್ ಜಮೀನಿನಲ್ಲಿ ರಾರಾಜಿಸುತ್ತಿದೆ. ಸಂಪಾಜೆಯಲ್ಲಿರುವ ಸುಮಾರು 85ಕ್ಕೂ ಅಧಿಕ ಸಂಖ್ಯೆಯ ಪಪ್ಪಾಯಿ ಗಿಡಗಳು ಸೂರಿಕುಮೇರು ಚರ್ಚ್ ನ ಪಪ್ಪಾಯಿಗಳನ್ನೇ ಹೋಲುತ್ತಿವೆ. ಸೂರಿಕುಮೇರು ಚರ್ಚ್ ಆವರಣದ ಕೃಷಿ ಕ್ರಾಂತಿ ಅದೆಷ್ಟೋ ಮನೆಮನಗಳಲ್ಲಿ ಕೃಷಿ ಕಾರ್ಯಕ್ಕೆ ಪ್ರೇರಣೆಯಾಗಿದೆ. ಹಲವು ಚರ್ಚುಗಳಲ್ಲಿ ಕೃಷಿ ಕಾಯಕದ ಚಟುವಟಿಕೆಗೆ ಚಾಲನೆ ದೊರೆತಿದೆ. ಸಂಪಾಜೆ ಚರ್ಚ್ ಇದಕ್ಕೊಂದು ನಿದರ್ಶನ. ತಮಗೆ ಪ್ರೇರಣೆಯಾದ ಸೂರಿಕುಮೇರು ಚರ್ಚಿನ ಧರ್ಮಗುರುಗಳಿಗೆ ಸಂಪಾಜೆ ಚರ್ಚಿನ ಧರ್ಮಗುರುಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
Be the first to comment on "ಸಂಪಾಜೆ ಚರ್ಚ್‌ನಲ್ಲೂ ಸೂರಿಕುಮೇರು ಚರ್ಚ್‌ನ ಪಪ್ಪಾಯಿ ಮೋಡಿ"