ಅವಶ್ಯಕ ವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತ ನೀಡಿದ ನಿರ್ಬಂಧ ಸಡಿಲಿಕೆಯ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಬಿ.ಸಿ.ರೋಡ್, ಬಂಟ್ವಾಳ, ಮೇಲ್ಕಾರ್, ಕೈಕಂಬ ಸಹಿತ ಗ್ರಾಮೀಣ ಪ್ರದೇಶಗಳಲ್ಲೂ ಜನದಟ್ಟಣೆ ಕಂಡುಬಂತು.
ಬೆಳಗ್ಗೆಯೇ ಬಂಟ್ವಾಳ ಪೊಲೀಸರು, ತಾಲೂಕಾಡಳಿತ, ಪುರಸಭೆ ಧ್ವನಿವರ್ಧಕಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡುತ್ತಿದ್ದರೆ, ಕೆಲವೆಡೆ ಮಾರ್ಕ್ ಮಾಡಿದ ಜಾಗಗಳಲ್ಲಿ ನಿಂತು ಖರೀದಿಗಳನ್ನು ನಡೆಸಿದರೆ, ಇನ್ನು ಕೆಲವೆಡೆ ಅಂಗಡಿಯೊಳಗೆ ನುಗ್ಗಿ ನೂಕುನುಗ್ಗಲು ಉಂಟಾಯಿತು. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ನಗರ ಠಾಣಾ ಎಸ್.ಐ. ಅವಿನಾಶ್, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸಹಿತ ಅಧಿಕಾರಿಗಳು ಅಲ್ಲಲ್ಲಿ ತೆರಳಿ ಜನರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರು. ಆದರೆ ಕೆಲವೊಂದು ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಲು ಸುಮಾರು 2 ಗಂಟೆ ಕ್ಯೂ ನಿಂತ ಅನುಭವವನ್ನು ಸಾರ್ವಜನಿಕರು ಹಂಚಿಕೊಂಡರು. ನಿಯಮ ಪಾಲಿಸುವವರು ಉರಿಬಿಸಿಲಲ್ಲಿ ಕ್ಯೂ ನಿಂತರು.
ಬಂಟ್ವಾಳದ ಪುರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನ ಎಂದಿನಂತೆ ಮನೆ ಮನೆ ಕಸ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದು, ಪೌರಕಾರ್ಮಿಕರು ತಮ್ಮ ಕರ್ತವ್ಯ ನಿಭಾಯಿಸಿದರು.
ಅಧಿಕಾರಿಗಳ ಪರಿಶೀಲನೆ: ಮಧ್ಯಾಹ್ನ 3 ಗಂಟೆಯ ವರೆಗೂ ಅವಕಾಶ ಇರುವುದರಿಂದ ಜನರು ಆರಾಮವಾಗಿ ಅಗತ್ಯವಸ್ತುಗಳ ಖರೀದಿ ಗೆ ಬರಬೇಕು, ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು, ಗುಂಪು ಸೇರಬಾರದು, ಅನಗತ್ಯ ಹೊರಬರಬಾರದು ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಮನವಿ ಮಾಡಿದರೂ ಕೆಲವರು ಮುಗಿಬಿದ್ದು ಖರೀದಿ ಮಾಡುವುದರಿಂದ ಗೊಂದಲ ಉಂಟಾಯಿತು. ದಿನಸಿ ಅಂಗಡಿಯೊಂದರಲ್ಲಿ ಇಲಾಖೆಯ ಆದೇಶ ಧಿಕ್ಕರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಸಾಮಾಗ್ರಿಗಳನ್ನು ಖರೀದಿಸಲು ಮುಂದಾಗಿರುವುದನ್ನು ಮಾಹಿತಿ ಪಡೆದ ಬಂಟ್ವಾಳ ತಾಲೂಕು ಕಚೇರಿ ಕಂದಾಯ ಆದಿಕಾರಿಗಳಾದ ಸೀತಾರಾಮ ಕಮ್ಮಾಜೆ, ಮಹೇಂದ್ರ, ಸದಾಶಿವ ಕೈಕಂಬ, ಸುಂದರ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ಜನರನ್ನು ಚದುರಿಸಿ ಸಾಮಾಜಿಕ ಅಂತರ ಕಾಯ್ದಕೊಳ್ಳಲು ಹಾಕಿದ ಗೆರೆಯೊಳಗೆ ನಿಲ್ಲಿಸಿದ ಪ್ರಸಂಗವೂ ನಡೆಯಿತು. ಬಸ್ ನಿಲ್ದಾಣಗಳಲ್ಲಿ ಜನರು ವಿಶ್ರಮಿಸಿಕೊಳ್ಳುವ ದೃಶ್ಯ ಕಂಡುಬಂದರೆ, ಆಟೊ ಸ್ಟ್ಯಾಂಡ್ ಗಳಲ್ಲಿ ಆಟೊಗಳು, ಟ್ಯಾಕ್ಸಿಗಳೂ ಕಂಡುಬಂದವು. ತ್ರಿಬ್ಬಲ್ ರೈಡ್ ಬೈಕ್ ಸವಾರರು ಸಿಕ್ಕಿದ ಛಾನ್ಸು ಬಿಡಬಾರದು ಎಂದುಕೊಂಡು ವೇಗದ ಸಂಚಾರವನ್ನು ನಡೆಸಿ ನಡೆದುಕೊಂಡು ಹೋಗುವವರ ದಿಕ್ಕುತಪ್ಪಿಸುತ್ತಿದ್ದುದೂ ಕಂಡುಬಂತು.
Be the first to comment on "ಅವಶ್ಯಕ ವಸ್ತು ಖರೀದಿಗೆ ಬಂಟ್ವಾಳ, ಬಿ.ಸಿ.ರೋಡಲ್ಲಿ ಜನದಟ್ಟಣೆ"