ಕೋವಿಡ್ 19 (ಕೊರೊನಾ ವೈರಾಣು ಕಾಯಿಲೆ 2019) ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರಂತರವಾಗಿ ಯಾವುದೇ ಅಡಚಣೆ ಇಲ್ಲದೆ ಅವಶ್ಯ ಸಾಮಾಗ್ರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಮಂಗಳೂರು ಸಹಾಯಕ ಕಮೀಷನರ್ ಅವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶವನ್ನು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಸ್ ಬೇಕಿದ್ದವರು ಮಂಗಳೂರಿನಲ್ಲಿರುವ ಸಹಾಯಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಕ ಆಯುಕ್ತರು ಅವರ ಉಪವಿಭಾಗ ವ್ಯಾಪ್ತಿಯಲ್ಲಿ ಅನುಮತಿ ಪತ್ರವನ್ನು ವಿತರಿಸುವಾಗ ಸಂಬಂಧಿಸಿದ ಸೇವೆ ಅತಿ ಅವಶ್ಯವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳತಕ್ಕದ್ದು ಎಂದು ಡಿ.ಸಿ. ತಿಳಿಸಿದ್ದು, ಅನುಮತಿ ಪತ್ರ ಪಡೆಯಲು ಅರ್ಹರು ಇವರು.
ಖಾಸಗಿ ಸೆಕ್ಯುರಿಟಿ ಗಾರ್ಡ್ಸ್, ಪೆಟ್ರೋಲ್, ಗ್ಯಾಸ್, ಎಲ್.ಪಿ.ಜಿ. ರಿಟೇಲ್ ನೌಕರರು, ಬ್ಯಾಂಕ್, ಎಟಿಎಂ, ವಿಮಾ ಕಂಪನಿ ನೌಕರರು, ಆಹಾರ ಪದಾರ್ಥಗಳ ಹೋಂ ಡೆಲಿವರಿ ಏಜಂಟರು, ಆನ್ಲೈನ್ ಔಷಧಗಳ ಕಂಪನಿಗಳ ಮತ್ತು ಇ ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಕೆಲಸ ಮಾಡುವವರು, ಆಹಾರ, ಪಡಿತರ ಅಥವಾ ದಿನಸಿ ಅಂಗಡಿಗಳು, ಹಣ್ಣು ಹಂಪಲು, ತರಕಾರಿ ಅಂಗಡಿಗಳು, ಡೈರಿಗಳು, ಮಾಂಸ ಮತ್ತು ಮೀನಿನ ಅಂಗಡಿಗಳ ಪ್ರಾಣಿಗಳ ಮೇವು ಅಂಗಡಿಗಳ ಸಿಬ್ಬಂದಿಗಳು, ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂ, ಲ್ಯಾಬ್, ಆಂಬುಲೆನ್ಸ್ ಸೇವೆ ಇತ್ಯಾದಿ ವೈದ್ಯಕೀಯ ಸೇವೆಗಳ ಸಿಬ್ಬಂದಿ, ಟೆಲಿಕಾಂ, ಇಂಟರ್ನೆಟ್ ಸೇವೆ ಸಿಬ್ಬಂದಿ, ಮಾಹಿತಿ ತಂತ್ರಜ್ಞಾನ, ಅಗತ್ಯ ಸೇವೆ ನಿರ್ವಹಿಸುವ ಐಟಿ ಸಕ್ರಿಯಗೊಳಿಸಿದ ಸೇವೆಗಳ ಸಿಬ್ಬಂದಿ, ಶಕ್ತಿ ಉತ್ಪಾದನೆ, ಪ್ರಸರಣ, ವಿತರಣಾ ಘಟಕ ಸಿಬ್ಬಂದಿ, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮು ಸೇವೆಗಳ ನೌಕರರು, ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳ ಸಿಬ್ಬಂದಿ, ಅಗತ್ಯ ವಸ್ತು ಸರಕು ಸಾಗಣೆ ಸಿಬ್ಬಂದಿಗಳಿಗೆ ಪಾಸ್ (ಅನುಮತಿ ಪತ್ರ) ವಿತರಿಸುವ ಅಧಿಕಾರ ಮಂಗಳೂರಿನ ಸಹಾಯಕ ಕಮೀಷನರ್ ಅವರಿಗೆ ಮಾತ್ರ ಇದೆ. ಅನುಮತಿ ಪತ್ರಗಳನ್ನು ವ್ಯಕ್ತಿ, ವಾಹನಗಳಿಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಜಿ ನೋಂದಣಿ ಹೊಂದಿದ ಸರಕಾರಿ ವಾಹನಗಳು, ಸರಕು ಸಾಗಾಟ ವಾಹನ, ಇಲಾಖಾ ಗುರುತಿನ ಚೀಟಿ ಹೊಂದಿದ ಸರಕಾರಿ ನೌಕರರ ವಾಹನಗಳಿಗೆ ಅನುಮತಿ ಪತ್ರ ಅವಶ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
Be the first to comment on "ನಿಷೇಧಾಜ್ಞೆ ಸಂದರ್ಭ ಪಾಸ್ ಬೇಕಿದ್ದರೆ ಸಹಾಯಕ ಕಮೀಷನರ್ ಸಂಪರ್ಕಿಸಿ"