ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೆಲವು ನಿರ್ಬಂಧಗಳನ್ನು ಸೂಚಿಸಿರುವ ಕಾರಣ, ಸಾಂಕ್ರಾಮಿಕವಾಗಿ ರೋಗ ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾ.16ರಂದು ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ನಡೆಸಲು ಉದ್ದೇಶಿಸಿದ್ದ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಸಂವಿಧಾನ ರಕ್ಷಿಸಿ, ದೇಶ ಉಳಿಸಿ ಧರಣಿ ಸತ್ಯಾಗ್ರಹವನ್ನು ಮುಂದಕ್ಕೆ ಹಾಕಲಾಗಿದೆ.
ಈ ವಿಷಯವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬಂಟ್ವಾಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರ ಮತ್ತು ರಾಜ್ಯದ ಕೆಲವು ನೀತಿಗಳ ವಿರುದ್ಧ ಸಂವಿಧಾನ ರಕ್ಷಿಸಿ, ದೇಶ ಉಳಿಸಿ ಘೋಷಣೆಯೊಂದಿಗೆ ಹಲವು ವಿಚಾರಗಳನ್ನು ಒಳಗೊಂಡ ಹಕ್ಕೊತ್ತಾಯವನ್ನು ಮುಂದಿಟ್ಟು ಸಮಾನ ಮನಸ್ಕ ಸಂಘಟನೆಗಳ ಬಂಟ್ವಾಳ ತಾಲೂಕು ಸಮನ್ವಯ ಸಮಿತಿಯಿಂದ 16ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿತ್ತು ಎಂದ ರೈ, ಆದರೆ ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸುವುದನ್ನು ವಾರದ ಮಟ್ಟಿಗೆ ಮುಂದೂಡಲು ವಿನಂತಿಸಿರುವ ಹಿನ್ನೆಲೆಯಲ್ಲಿ ಹಾಗೂ ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಸತ್ಯಾಗ್ರಹವನ್ನು ಮುಂದಕ್ಕೆ ಹಾಕಲಾಗಿದೆ ಎಂದರು. ಈ ಸಂದರ್ಭ ಪ್ರಮುಖರಾದ ಮಹಮ್ಮದ್ ಶಫಿ, ಬೇಬಿ ಕುಂದರ್, ಸುದೀಪ್ ಶೆಟ್ಟಿ ಮಾಣಿ, ಬಿ.ಎಂ.ಅಬ್ಬಾಸ್ ಆಲಿ, ಬಿ.ಶೇಖರ್, ಪ್ರಭಾಕರ ದೈವಗುಡ್ಡೆ, ಮಹಮ್ಮದ್ ನಂದಾವರ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಕೊರೊನಾ ಎಫೆಕ್ಟ್: ಸಮಾನ ಮನಸ್ಕ ಸಂಘಟನೆಗಳ ಸತ್ಯಾಗ್ರಹ ಮುಂದಕ್ಕೆ"