- ಬೆಳೆಯುತ್ತಿರುವ ಮೇಲ್ಕಾರ್ ನಲ್ಲಿ ಬೇಕು ಸುಸಜ್ಜಿತ ಬಸ್ ನಿಲ್ದಾಣ
- Harish Mambady www.bantwalnews.com
- ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕಿನ ಬಂಟ್ವಾಳ ಪುರಸಭೆ ವ್ಯಾಪ್ತಿಯ ಮೇಲ್ಕಾರಿನಿಂದ ಮುಡಿಪಿಗೆ ತೆರಳುವ ಮಾರ್ಗದ ಒಂದು ಕಡೆ ಆಟೊಗಳು ರಸ್ತೆ ಮತ್ತು ಪಕ್ಕದ ವಾಣಿಜ್ಯ ಕಟ್ಟಡದ ನಡುವೆ ಸಾಲುಸಾಲಾಗಿ ಶೆಲ್ಟರ್ ನಡಿ ವಿಶ್ರಮಿಸಿಕೊಂಡು ಪ್ರಯಾಣಿಕರಿಗೆ ಕಾಯುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಬಸ್ ಪ್ರಯಾಣಿಕರು ಬೆವರೊರೆಸಿಕೊಳ್ಳುತ್ತಾರೆ.
ಧೂಳು, ಮಳೆ, ಬಿಸಿಲೆನ್ನದೆ ಪುಟ್ಟ ಮಕ್ಕಳನ್ನೆತ್ತಿಕೊಂಡು ಬಸ್ಸುಗಳಿಗೆ ಕಾಯುತ್ತಾರೆ. ಬಸ್ಸುಗಳೂ ಅದೇ ಜಾಗದಲ್ಲಿ ರಸ್ತೆಯಲ್ಲೇ ನಿಲ್ಲುತ್ತವೆ. ಅಲ್ಲೇ ಪ್ರಯಾಣಿಕರನ್ನು ನಿರ್ವಾಹಕರು ಕೂಗಿ ಕರೆಯುತ್ತಾರೆ. ಬಸ್ಸುಗಳಿಗೂ ನಿಲ್ದಾಣವಿಲ್ಲ, ಪ್ರಯಾಣಿಕರಿಗೂ ತಂಗುದಾಣವಿಲ್ಲ. ಪಟ್ಟಣವೇನೋ ಬೃಹದಾಕಾರವಾಗಿ ಬೆಳೆಯುತ್ತಿದೆ.
ಮೇಲ್ಕಾರ್ ನಿಂದ ಮುಡಿಪು, ಕೊಣಾಜೆ ಕಡೆಗೆ ಹೋಗುವವರಷ್ಟೇ ಅಲ್ಲ, ಪುತ್ತೂರು, ವಿಟ್ಲ ಕಡೆಗಳಿಗೆ ಹೋಗುವವರು, ಬಿ.ಸಿ.ರೋಡ್, ಮಂಗಳೂರಿಗೆ ತೆರಳುವ ಪ್ರಯಾಣಿಕರು ಬಸ್ಸು ಹತ್ತಲು ಹರಸಾಹಸಪಡಬೇಕು.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಬೆಳೆಯುತ್ತಿರುವ ಪ್ರದೇಶ ಎಂದೇ ಮೇಲ್ಕಾರ್ ಪರಿಗಣಿತವಾಗಿದೆ. ಇಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಮೇಲ್ಕಾರ್ ಜಂಕ್ಷನ್ ಅಪಾಯಕಾರಿಯಾಗಿರುವುದು ಎಂಬುದು ಈ ಮೊದಲೇ ಸಾಬೀತಾಗಿದೆ. ಇದಕ್ಕೆ ಮತ್ತಷ್ಟು ಸೇರ್ಪಡೆ ಎಂಬಂತೆ ಮಂಗಳೂರಿಗೆ ತೆರಳುವ ಜಾಗದಲ್ಲಿ ಮಾಡಲಾದ ಬಸ್ ಬೇಯಲ್ಲಿ ಬಸ್ಸುಗಳು ಪ್ರವೇಶಿಸುವುದಿಲ್ಲ.
ಸ್ಥಳೀಯ ಖಾಸಗಿ ಬಸ್ಸುಗಳು ಬರುತ್ತವೆಯೇ ವಿನಃ ಕೆಎಸ್ಸಾರ್ಟಿಸಿ, ಮಂಗಳೂರಿಗೆ ತೆರಳುವ ಎಕ್ಸ್ ಪ್ರೆಸ್ ಬಸ್ಸುಗಳು, ಬೇಗ ಬೇಗ ಎಂಬ ನಿರ್ವಾಹಕರ ಧಾವಂತದಲ್ಲಿ ಪ್ರಯಾಣಿಕರನ್ನೂ ಗಲಿಬಿಲಿಗೊಳಿಸಿ ಹತ್ತಿಸುತ್ತಾರೆ. ಆ ವೇಳೆ ಯಾವುದಾದರೂ ವಾಹನಗಳು ಅಲ್ಲೇ ಸಾಗಿದರೆ, ಅದರಡಿಗೆ ಬೀಳಬೇಕಾದ ಪರಿಸ್ಥಿತಿ ಇದೆ.
ಮೇಲ್ಕಾರಿನಲ್ಲಿ ಪ್ರಯಾಣಿಕರು ನಿಲ್ಲಲು ಸೂಕ್ತವಾದ ಜಾಗದಲ್ಲಿ ಶೆಲ್ಟರ್ ಅಗತ್ಯ. ಬಸ್ಸುಗಳು ರಸ್ತೆಯಲ್ಲಿ ನಿಲ್ಲದೆ, ಬಸ್ ಬೇ ಪ್ರವೇಶಿಸಬೇಕು. ಬಸ್ ಬೇಯಲ್ಲಿ ಬಸ್ಸುಗಳು ಮಾತ್ರ ನಿಲ್ಲಲು ಅವಕಾಶವಿರಬೇಕು. ಇತರ ವಾಹನಗಳಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಬಾರದು. ಪ್ರಯಾಣಿಕರಿಗೆ ಸೂಕ್ತವಾದ ಶೌಚಾಲಯವೂ ಇಲ್ಲಿ ಅಗತ್ಯ.
Be the first to comment on "ಬಸ್ ಪ್ರಯಾಣಿಕರಿಗೆ ಬಿಸಿಲೇ ಸೂರು, ರಸ್ತೆಯೇ ತಂಗುದಾಣ"