ಮಂಗಳೂರು: ಗಂಡು ಮಕ್ಕಳಿಗೆ ಸರಿಸಮಾನವಾಗಿ ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು. ಹೆಣ್ಣು ಮಕ್ಕಳು ಮನೆಗೆ ತಡವಾಗಿ ಬಂದರೆ ಪ್ರಶ್ನಿಸುವ ಪೋಷಕರು ಗಂಡು ಮಕ್ಕಳು ತಡವಾಗಿ ಬಂದರೂ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಗಂಡು- ಹೆಣ್ಣು ಮಕ್ಕಳ ನಡುವೆ ಯಾವುದೇ ತಾರತಮ್ಯ ಮಾಡಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಕಿವಿಮಾತು ಹೇಳಿದರು.
ಶ್ರೀ ಸಾಯಿ ಸಾಗರ್ ಫೌಂಡೇಶನ್ ಪ್ರವರ್ತಿತ ಜಾಗೃತ ಮಹಿಳಾ ವೇದಿಕೆ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ನಡೆದ ಮಹಿಳಾ ಸಮಾವೇಶವನ್ನು ಅವರು ಉದ್ಘಾಟಿಸಿದರು.
ಮಹಿಳೆಯರಲ್ಲಿ ಅಗಾಧ ಶಕ್ತಿಯಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ದುಡಿಯಬಲ್ಲಳು. ಕೌಟುಂಬಿಕ ವ್ಯವಸ್ಥೆಯಲ್ಲಂತು ಹೆಣ್ಣಿನ ಸೇವೆ ಅನನ್ಯವಾದದ್ದು ಎಂದವರು ತಿಳಿಸಿದರು.
ಕುಟುಂಬದ ರಥ ಸುಗಮವಾಗಿ ಸಾಗಲು ಪುರುಷ ಹಾಗೂ ಮಹಿಳೆಯರು ಸಮಾನ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿಯೊಬ್ಬ ಪುರುಷನ ಸಾಧನೆ ಹಿಂದೆ ಮಹಿಳೆ ಇದ್ದ ಹಾಗೆ ಪ್ರತಿಯೊಬ್ಬ ಮಹಿಳೆಯ ಸಾಧನೆ ಹಿಂದೆ ಪುರುಷ ಕೂಡ ಇರುತ್ತಾನೆ ಎಂದರು.
ಸಂಸ್ಕೃತಿಯನ್ನು ಆರಾಧಿಸುವ ಪ್ರವೃತ್ತಿ ನಮ್ಮ ಮಹಿಳೆಯರದ್ದು. ಹೆಣ್ಣು ಮಕ್ಕಳನ್ನು ಪೂಜಿಸುವ ಸಂಸ್ಕೃತಿ ನಮ್ಮದು. ನಮ್ಮ ಭೂಮಿ ಹೆಣ್ಣು, ನಮ್ಮಲ್ಲಿ ಹರಿಯುವ ನದಿ- ತೊರೆಗಳು ಹೆಣ್ಣು. ಬೆಟ್ಟ ಗುಡ್ಡ, ಇಡೀ ಪ್ರಕೃತಿಯೇ ಹೆಣ್ಣು. ಇದು ನಮ್ಮಗೆ ಹೆಮ್ಮೆ ಮತ್ತು ಗರಿಮೆ ಎಂದು ಅವರು ಹೇಳಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ, ಮಹಿಳಾ ದಿನಾಚರಣೆಯ ದಿನ ಮಾತ್ರ ಕಾರ್ಯ ಕ್ರಮ ಹಮ್ಮಿಕೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರೆ ಸಾಲದು, ವರ್ಷವಿಡೀ ನಾವು ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡಬೇಕು. ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ರಾಜಕೀಯ, ಸಾಮಾಜಿಕ, ಶಿಕ್ಷಣ, ಆರ್ಥಿಕ ಮುಂತಾದ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಬಾಹ್ಯಾಕಾಶ ವಿಜ್ಞಾನದಲ್ಲಿಯೂ ಮಹಿಳೆಯರಿದ್ದಾರೆ ಎಂದು ನುಡಿದರು.
ಜೆಡಿಎಸ್‌ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮತಿ ಹೆಗ್ಡೆ, ಕಾರ್ಪೊರೇಟರ್ ವನಿತಾ ಪ್ರಸಾದ್‌ಆಚಾರ್ಯ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ (ಮೈಸೂರು) ಟಿ.ಸಿ. ಪೂರ್ಣಿಮಾ, ಸಿಡಿಪಿಒ ಶ್ಯಾಮಲಾ, ನ್ಯಾಯವಾದಿ ರಾಘವೇಂದ್ರ ರಾವ್, ರಾಜಗೋಪಾಲ ರೈ, ಶ್ರೀ ಸಾಯಿ ಸಾಗರ್ ಫೌಂಡೇಶನ್ ಸಂಸ್ಥಾಪಕ ಪ್ರೀತಮ್ ಸಾಗರ್, ಜಾಗೃತ ಮಹಿಳಾ ವೇದಿಕೆ ಸ್ಥಾಪಕ ಅಧ್ಯಕ್ಷೆ ಪವಿತ್ರಾ ಆಚಾರ್ಯ ಉಪಸ್ಥಿತರಿದ್ದರು. ಶ್ರುತಿ ಜೈನ್ ಕಾರ‌್ಯಕ್ರಮ ನಿರ್ವಹಿಸಿದರು.
Be the first to comment on "ಗಂಡು- ಹೆಣ್ಣು ಮಕ್ಕಳ ನಡುವೆ ಯಾವುದೇ ತಾರತಮ್ಯ ಮಾಡಬಾರದು: ಶ್ಯಾಮಲಾ ಕುಂದರ್"