- ಕಲ್ಪನೆ ತಿರುವಿನಲ್ಲಿ ನಡೆದ ಘಟನೆ, ಮೂವರಿಗೆ ಗಂಭೀರ ಗಾಯ, ಹೊಂಡಕ್ಕೆ ಬಿದ್ದ ಬಸ್
ಬಂಟ್ವಾಳ ತಾಲೂಕಿನ ಕಲ್ಪನೆ ತಿರುವಿನಲ್ಲಿ ಮದುವೆಗೆ ತೆರಳಿದವರನ್ನು ಕರೆದುಕೊಂಡು ಬರುತ್ತಿದ್ದ ಬಸ್ ಇನ್ನೊಂದು ಬಸ್ ಗೆ ಡಿಕ್ಕಿಯಾಗಿ ಬಸ್ಸು ಸಮೀಪದ ಹೊಂಡಕ್ಕೆ ಬಿದ್ದು, ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಮಧ್ಯಾಹ್ನದ ಬಳಿಕ ಈ ಘಟನೆ ನಡೆದಿದೆ.
ಘಟನೆಯಲ್ಲಿ ಪ್ರಯಾಣಿಕ ಮೋಹನ್ ಸಿಂಗ್ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ. ಉಳಿದಂತೆ 12 ಮಂದಿ ಬಂಟ್ವಾಳ ಸರಕಾರಿ ಆಸ್ಪತ್ರೆ, 7 ಮಂದಿ ಬಿ.ಸಿ.ರೋಡು ಸೋಮಯಾಜಿ ಅಸ್ಪತ್ರೆ, 19 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ, 15 ಮಂದಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ
ಬಿ.ಸಿ.ರೋಡಿನಿಂದ ಪೊಳಲಿಗೆ ಹೋಗುತ್ತಿದ್ದ ಖಾಸಗಿ ಸರ್ವೀಸ್ ಬಸ್ಸಿಗೆ ಅದೇ ಮಾರ್ಗದಿಂದ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮರಳುತ್ತಿದ್ದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಈ ಸಂದರ್ಭ ಎದುರಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಅದೇ ವೇಳೆ ಡಿಕ್ಕಿ ಹೊಡೆದ ಬಸ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹೊಂಡಕ್ಕೆ ಉರುಳಿತು. ಈ ಸಂದರ್ಭ ಕುತೂಹಲಿಗರು ಸೇರಿದ ಕಾರಣ ಟ್ರಾಫಿಕ್ ಜಾಮ್ ಉಂಟಾಯಿತು.
ಕೂಡಲೇ ಸ್ಥಳದಲ್ಲಿ ಗಾಯಗೊಂಡವವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ತೀವ್ರ ಗಾಯಗಳಿದ್ದವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Be the first to comment on "ಮದ್ವೆ ಮುಗಿಸಿ ಮರಳುತ್ತಿದ್ದ ತಂಡ ಇದ್ದ ಬಸ್, ಮತ್ತೊಂದು ಬಸ್ಸಿಗೆ ಡಿಕ್ಕಿ: 20ಕ್ಕೂ ಅಧಿಕ ಮಂದಿಗೆ ಗಾಯ"