ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘ ಆಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ೧೯೮೬ರಡಿ ಕಾನೂನು ಅರಿವು ಕಾರ್ಯಾಗಾರ ಬಿ.ಸಿ.ರೋಡಿನ ತಾಪಂ ಎಸ್.ಜಿ.ಎಸ್.ವೈ. ಸಭಾಭವನದಲ್ಲಿ ನಡೆಯಿತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘ, ಸಂಸ್ಥೆಗಳು, ಪಿಡಿಒ ಸಹಿತ ನಾನಾ ಇಲಾಖೆಗಳ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಧೀಶ, ಜೆಎಂಎಫ್‌ಸಿ, ಮತ್ತು ಕಾನೂನು ಸೇವಾ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಅಹಮದ್, ಪರಿಣಾಮಕಾರಿಯಾಗಿ ಕಾಯ್ದೆಯನ್ನು ಅನುಷ್ಠಾನಿಸಬೇಕು. ತಾಲೂಕನ್ನು ಬಾಲಕಾರ್ಮಿಕ ಮುಕ್ತವಾಗಿಸಲು ಪ್ರಯತ್ನಿಸಬಹುದು ಎಂದರು.
ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ತಿಮ್ಮಾಪುರ ಮಾತನಾಡಿ, ವಿವಿಧ ಕಾರಣಗಳಿಂದ ಬಾಲಕಾರ್ಮಿಕರಾಗಿ ದುಡಿಯುವವರನ್ನು ಕೆಲಸದಿಂದ ಬಿಡಿಸಬೇಕು, ಸರಕಾರದ ಯೋಜನೆಯ ಸೌಲಭ್ಯ ಪಡೆದು ಶಿಕ್ಷಣವನ್ನು ಒದಗಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಮಾತನಾಡಿ, ಬಡತನ ನಿವಾರಣೆಗೆ ಕ್ರಮ ಕೈಗೊಂಡರೆ, ಬಾಲಕಾರ್ಮಿಕರ ಸಂಖ್ಯೆ ಇಳಿಕೆಯಾಗಬಹುದು ಎಂದರು. ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿದರು. ಬಿಆರ್‌ಸಿ ರಾಧಾಕೃಷ್ಣ ಭಟ್, ಸಿಡಿಪಿಒ ಗಾಯತ್ರಿ ಕಂಬಳಿ, ಬಾಲಕಾರ್ಮಿಕ ಯೋಜನಾ ಸಂಘ ಯೋಜನಾ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು. ಕಾರ್ಯಾಗಾರವನ್ನು ಹಿರಿಯ ವಕೀಲರಾದ ನಿಕೇತ್ ಶೆಟ್ಟಿ ನಿರ್ವಹಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ಕಾರ್ಮಿಕ ನಿರೀಕ್ಷಕ ಮರ್ಲಿನ್ ಗ್ರೇಸಿ ವಂದಿಸಿದರು.
Be the first to comment on "ಬಾಲಕಾರ್ಮಿಕ ನಿಷೇಧ ಕಾನೂನು ಅರಿವು ಕಾರ್ಯಾಗಾರ"