ಕಲ್ಲಡ್ಕ ಸಮೀಪ ಗೇರುಕಟ್ಟೆಯಲ್ಲಿರುವ, ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಸಪ್ತಮ ವರ್ಧಂತ್ಯುತ್ಸವ ನಡೆಯಿತು.
ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ದೇಗುಲಗಳ ಬ್ರಹ್ಮಕಲಶ, ಧಾರ್ಮಿಕ ಸಮಾರಂಭಗಳಲ್ಲಿ ರಾಜಕಾರಣಿಗಳಿಗೆ ಮಹತ್ವ ನೀಡಬಾರದು. ಸೂಕ್ತ ಯೋಜನೆಗಳಿಗೆ ಅನುದಾನ ನೀಡುವುದು ಅವರ ಕರ್ತವ್ಯ. ದೇವರಿಗಿಂತ ದೊಡ್ಡ ಅವರ ಕಟೌಟ್ ಹಾಕುವುದು ಸರಿಯಲ್ಲ. ಭಕ್ತರು ದೇಗುಲಕ್ಕೆ ಸಲ್ಲಿಸಿದ ಕಾಣಿಕೆಯನ್ನು ಈಗಿನ ಸರಕಾರ ಸದುಪಯೋಗಪಡಿಸುತ್ತದೆ. ಈ ವರ್ಷ ಅಕ್ಷಯ ತೃತೀಯದಂದು ಹಲವು ದೇಗುಲಗಳಲ್ಲಿ ಸರಳವಾದ ಸಾಮೂಹಿಕ ವಿವಾಹವನ್ನು ಆಯೋಜಿಸಲಿದೆ. ಕರಿಮಣಿ ಸರ ಹಾಗೂ ಸ್ವಲ್ಪ ಮೊತ್ತವನ್ನು ಮದುಮಕ್ಕಳಿಗೆ ನೀಡಲಿದೆ ಎಂದರು.
ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವಾ ಸಮಿತಿಯ ಪರಿಶ್ರಮದಿಂದ ಉಮಾಶಿವ ಕ್ಷೇತ್ರ ಪ್ರಗತಿಯನ್ನು ಸಾಧಿಸಿದೆ ಎಂದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಜಾರಾಮ ಭಟ್ ಬಲಿಪಗುಳಿ, ಎಲ್ಲೈಸಿ ನಿವೃತ್ತ ಮುಖ್ಯ ಪ್ರಬಂಧಕ ಪ್ರೇಮನಾಥ ರಾವ್ ಭಾಗವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಅಮೈ ಜನಾರ್ದನ ಭಟ್ ವಂದಿಸಿದರು. ಸೀಮಾ ಕೃಷ್ಣಪ್ರಸಾದ್ ನಿರೂಪಿಸಿದರು.
ಬೆಳಗ್ಗೆ ಪುಣ್ಯಾಹವಾಚನ, ಗಣಪತಿ ಹವನ, ನವಕ ಪ್ರತಿಷ್ಠೆ, ಶತರುದ್ರ ಜಪ, ನಾಗ, ರಕ್ತೇಶ್ವರಿ ತಂಬಿಲ, ಸಾಮೂಹಿಕ ಕುಂಕುಮಾರ್ಚನೆ, ನವಕ ಕಲಶಾಭಿಷೇಕ, ಶತರುದ್ರ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127
Be the first to comment on "ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ: ಪ್ರತಿಷ್ಠಾ ಬ್ರಹ್ಮಕಲಶದ ಸಪ್ತಮ ವರ್ಧಂತ್ಯುತ್ಸವ"