www.bantwalnews.com Editor: Harish Mambady
ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಉತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಭಕ್ತರಿಂದ ಹೊರೆಕಾಣಿಕೆ ಮೆರವಣಿಗೆ ಭಾನುವಾರ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಕ್ಷೇತ್ರದವರೆಗೆ ನಡೆಯಿತು.
ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸಮೀಪ ಮೈದಾನದಲ್ಲಿ ಒಟ್ಟು ಸೇರಿ ನಂತರ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರ ತಲುಪಲಾಯಿತು. ಅನ್ನಪ್ರಸಾದಕ್ಕೆ ಬೇಕಾದ ಮಲೆಬೆನ್ನೂರು, ಟೈಗರ್ ಬ್ರಾಂಡ್ ಬೆಳ್ತಿಗೆ ಅಕ್ಕಿ, ಸಕ್ಕರೆ, ಹೆಸರುಬೇಳೆ, ಕಡ್ಲೆಬೇಳೆ, ಮೆಣಸು, ದಿನಸಿ ಸಾಮಾನು, ತೆಂಗಿನಕಾಯಿ, ಸುವರ್ಣಗೆಡ್ಡೆ, ಕುಂಬಳಕಾಯಿ, ಸಿಹಿಕುಂಬಳಕಾಯಿ, ಸೌತೆ, ಬಾಳೆ ಎಲೆ, ತುಪ್ಪ, ಕರ್ಪೂರ, ಬೆಲ್ಲ, ಅವಲಕ್ಕಿ, ಎಳ್ಳೆಣ್ಣೆ, ನಾಗಮಂಡಲಕ್ಕೆ ಅಗತ್ಯವಿರುವ ಕಂಗಿನ ಹೂ ಪಿಂಗಾರ ಇತ್ಯಾದಿ ವಸ್ತುಗಳು ಇರುವ ಹೊರೆಕಾಣಿಕೆಯನ್ನು ಜೀಪು, ಮಿನಿ ಟೆಂಪೊ ಸಹಿತ ವಾಹನಗಳಲ್ಲಿ ಭಕ್ತರು ಕೊಂಡೊಯ್ದರು.
ದೇವತಾರ್ಚನೆ ನಡೆಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಹೊರೆಕಾಣಿಕೆ ಮೆರವಣಿಗೆಯ ನೇತೃತ್ವವಹಿಸಿದ್ದರು. ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಹೊರೆಕಾಣಿಕೆ ಸಂಚಾಲಕರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಭುವನೇಶ ಪಚ್ಚಿನಡ್ಕ, ಪ್ರಮುಖರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸದಾನಂದ ಶೆಟ್ಟಿ ರಂಗೋಲಿ, ಎ.ಸಿ.ಭಂಡಾರಿ, ರಾಜೇಶ್ ಎಲ್. ನಾಯಕ್, ತುಂಬೆ ಪ್ರಕಾಶ್ ಶೆಟ್ಟಿ ಶ್ರೀಶೈಲ, ಸಂಪತ್ ಕುಮಾರ್ ಶೆಟ್ಟಿ ಸರಪಾಡಿ, ಮಾಧವ ಮಾವೆ, ಯಶವಂತ ದೇರಾಜೆ, ಬೇಬಿ ಕುಂದರ್, ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ತಾರಾನಾಥ ಕೊಟ್ಟಾರಿ, ಕಮಲಾಕ್ಷಿ ಪೂಜಾರಿ, ಶ್ರೀಕಾಂತ ಶೆಟ್ಟಿ, ವಿಶ್ವನಾಥ ಗಾಣದಪಡ್ಪು, ಜಗನ್ನಾಥ ಬಂಗೇರ, ಪುಷ್ಪರಾಜ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ ಸಹಿತ ನಾನಾ ಗಣ್ಯರು ಈ ಸಂದರ್ಭ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಸ್ವಚ್ಛತೆಗೆ ಸಂಬಂಧಿಸಿ ಕಸದ ಬುಟ್ಟಿಯನ್ನು ಹೊತ್ತ ವಾಹನ ಗಮನ ಸೆಳೆಯಿತು.
Be the first to comment on "ಕಟೀಲು ಬ್ರಹ್ಮಕಲಶೋತ್ಸವ: ಬಂಟ್ವಾಳದಿಂದ ಹೊರೆಕಾಣಿಕೆ ಮೆರವಣಿಗೆ"