ಸಿದ್ಧಕಟ್ಟೆ ಸಮೀಪ ಘಟನೆ, ಪೊಲೀಸ್ ಗೆ ಗಾಯ, ಆರೋಪಿ ಬಂಧನ
ತನ್ನನ್ನು ಹಿಡಿಯಲು ಬಂದ ಪೊಲೀಸ್ ಸಿಬ್ಬಂದಿಗೆ ಹಲವು ಪ್ರಕರಣಗಳಿಗೆ ಬೇಕಾದ ಆರೋಪಿಯೊಬ್ಬ ಹಲ್ಲೆ ನಡೆಸಿ, ತಳ್ಳಿ ಹಾಕಿದ ಪ್ರಕರಣ ಸಿದ್ಧಕಟ್ಟೆ ಸಮೀಪ ಕೆರೆಬಳಿ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಕಾನ್ಸ್ ಟೆಬಲ್ ಮಹೇಂದ್ರ ಅವರ ಎಡಕಾಲಿನ ಮೂಳೆ ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ತುಂಬೆ ರಾಮಲ್ ಕಟ್ಟೆ ನಿವಾಸಿ ನವಾಜ್ (42)ನನ್ನು ಪೊಲೀಸರು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಠಾಣೆ 08/2020 ಕಲಂ 324,333,353 IPC ರಂತೆ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ
ವಾರಂಟ್ ಆರೋಪಿಯಾಗಿರುವ ನವಾಜ್ ಇತ್ತೀಚೆಗೆ ಸಿದ್ದಕಟ್ಟೆಯ ಕಡೆಯಲ್ಲಿ ಓಡಾಡಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಘಟನೆ ಸಂಭವಿಸಿದೆ. ಸಿಬ್ಬಂದಿಗಳಾದ ಮಹೇಂದ್ರ ಮತ್ತು ರವಿ ಹುಡುಕಾಟ ನಡೆಸುತ್ತದ್ದ ವೇಳೆ ನವಾಜ್ ಓಡಿಹೋಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ಆರೋಪಿಯನ್ನು ಹಿಡಿದುಕೊಂಡ ಸಂದರ್ಭ ಕಾನ್ಸ್ ಟೇಬಲ್ ಮಹೇಂದ್ರ ಅವರನ್ನು ತಗ್ಗು ಪ್ರದೇಶಕ್ಕೆ ದೂಡಿಹಾಕಿ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಗಳಾದ ಮಾಧವ ಮತ್ತು ರವಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಘಟನೆಯಿಂದ ಮಹೇಂದ್ರ ಅವರ ಎಡಕಾಲಿನ ಮೂಳೆ ಮುರಿತವಾಗಿ ಗಂಭೀರ ಗಾಯಗೊಂಡರು.
ಗಾಯಾಳು ಮಹೇಂದ್ರರನ್ನು ಎಸ್ಪಿ ಲಕ್ಷ್ಮೀಪ್ರಸಾದ್ ,ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
Be the first to comment on "ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸ್ ಕಾನ್ಸಟೇಬಲ್ ಗೆ ಹಲ್ಲೆ"