ಮಂಗಳೂರು ಶಕ್ತಿನಗರದಲ್ಲಿರುವ ಶಕ್ತಿ ಪದವಿಪೂರ್ವ ಕಾಲೇಜಿನಲ್ಲಿ ಡಾ. ವಸಂತಕುಮಾರ ಪೆರ್ಲ ಅವರ ಸಾಹಿತ್ಯೋತ್ಸವ ಕಾರ್ಯಕ್ರಮ ಶನಿವಾರ (ದಿನಾಂಕ ೧೧ ರಂದು) ದಿನಪೂರ್ತಿ ಅರ್ಥಪೂರ್ಣವಾಗಿ ಜರಗಿತು.
ಪೂರ್ವಾಹ್ನ ಜರಗಿದ ಉದ್ಘಾಟನಾ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ ರೈ ಅವರು ಸಾಹಿತ್ಯ, ಸಂಘಟನೆ, ಮಾಧ್ಯಮ, ರಂಗಭೂಮಿ, ಸಮಾಜಸೇವೆ ಇವೆಲ್ಲ ಸೃಜನಶೀಲತೆಯ ವಿವಿಧ ಮುಖಗಳಾಗಿದ್ದು ಕರ್ತೃತ್ವ ಶಕ್ತಿಯ ಮೂಲಕ ಶಕ್ತರಾದ ವ್ಯಕ್ತಿಗಳಲ್ಲಿ ಅಭಿವ್ಯಕ್ತವಾಗುತ್ತ ಹೋಗುತ್ತದೆ. ಡಾ. ವಸಂತಕುಮಾರ ಪೆರ್ಲ ಅವರು ಈ ಹಲವಾರು ಗುಣಗಳನ್ನು ಮೈಗೂಡಿಸಿಕೊಂಡ ಸಾಧಕರು ಎಂದು ಹೇಳಿದರು.
ಸಮಾಜ ಕಟ್ಟುವುದೆಂದರೆ ಎಲ್ಲ ರಂಗಗಳಲ್ಲಿರುವವರು ತಮ್ಮ ತಮ್ಮ ಕೆಲಸಗಳನ್ನು ಸಮರ್ಥವಾಗಿ ಮಾಡುವುದಾಗಿದೆ. ಚೌಕಟ್ಟನ್ನು ಮೀರಿದಾಗ ಬೆಳೆಯುವ ಹಾದಿಗಳು ತನ್ನಿಂದ ತಾನೇ ಗೋಚರಿಸುತ್ತವೆ. ಹೀಗೆ ಚೌಕಟ್ಟು ಮೀರಿ ಬೆಳೆದ ವ್ಯಕ್ತಿಗಳಲ್ಲಿ ಡಾ. ಪೆರ್ಲ ಅವರು ಒಬ್ಬರು ಡಾ. ಬಿ. ಎ. ವಿವೇಕ ರೈ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎಂ. ಎಸ್. ಮಹಾಬಲೇಶ್ವರ ಭಟ್ ಅವರು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು ಒಂದು ನಾಡಿನ ಸಂಪನ್ನತೆಯನ್ನು ತೋರಿಸಿ ಕೊಡುತ್ತವೆ. ಯಾವುದೇ ಕ್ಷೇತ್ರದಲ್ಲಿ ನಾವು ಕೆಲಸ ಮಾಡುತ್ತಿದ್ದರೂ ಕಲೆ ಸಾಹಿತ್ಯದ ಚಟುವಟಿಕೆಗಳು ಮನಸ್ಸಿನ ಒತ್ತಡ ನಿವಾರಿಸಿ ತಂಪನ್ನು ನೀಡುತ್ತವೆ. ಮೌಲಿಕವಾದ ಸಾಹಿತ್ಯ ಚಟುವಟಿಕೆಗಳು ಹೆಚ್ಚು ಹೆಚ್ಚು ನಡೆಯುತ್ತಿರಬೇಕು. ಡಾ. ವಸಂತಕುಮಾರ ಪೆರ್ಲ ತನ್ನ ವೈವಿಧ್ಯಮಯವಾದ ಸಾಹಿತ್ಯ ಚಟುವಟಿಕೆಗಳ ಮೂಲಕ ಓದುಗರ ಮನ ಗೆದ್ದವರು. ಆಕಾಶವಾಣಿಯ ಮೂಲಕ ದೊಡ್ಡ ಕೆಲಸ ಮಾಡಿದವರು. ಮಾಧ್ಯಮ, ಸಂಘಟನೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದವರು. ಪೆರ್ಲರ ಸಾಹಿತ್ಯೋತ್ಸವ ಇವುಗಳನ್ನು ಗುರುತಿಸುವ ಒಂದು ಸಾರ್ಥಕ ಪ್ರಯತ್ನ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಕೆ. ಸಿ. ನಾಯ್ಕ್ ವಹಿಸಿದ್ದರು. ಬಹುಮುಖೀ ಆಯಾಮದ ವ್ಯಕ್ತಿತ್ವ ಇರುವ ಡಾ. ಪೆರ್ಲರ ಸಾಹಿತ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತಿಗಿಂತಲೂ ಸಾಹಿತ್ಯವನ್ನು ಗುರುತಿಸುವ ಗುಣಗೌರವ ಸಮಾಜದಲ್ಲಿ ಮೂಡಬೇಕು ಎಂದರು.
ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ಪ್ರಭಾಕರ ಎಸ್. ಜಿ. ಮತ್ತು ಶಕ್ತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಸಾಂದರ್ಭಿಕವಾಗಿ ಮಾತಾಡಿದರು.ಪ್ರಾಧ್ಯಾಪಕಿ ಶಶಿಕಲಾ ಸ್ವಾಗತಿಸಿದರು. ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕ ಶ್ರೀನಿಧಿ ಅಭ್ಯಂಕರ್ ವಂದಿಸಿದರು.
ದಿನಪೂರ್ತಿ ಆಯೋಜಿಸಲಾದ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣಗಳು, ಕವಿಗೋಷ್ಠಿ, ಭಾವಗೀತೆಗಳ ಪ್ರಸ್ತುತಿ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಿದವು.
Be the first to comment on "ಮಂಗಳೂರಿನ ಶಕ್ತಿನಗರದಲ್ಲಿ ದಿನ ಪೂರ್ತಿ ಡಾ. ವಸಂತಕುಮಾರ ಪೆರ್ಲರ ಸಾಹಿತ್ಯೋತ್ಸವ"