ಮಂಗಳೂರು: ಹೊಸ ತಲೆಮಾರಿನ ಪ್ರಮುಖ ಕವಿ ಹಾಗೂ ಸಾಹಿತಿಗಳಾಗಿರುವ ಡಾ. ವಸಂತಕುಮಾರ ಪೆರ್ಲ ಅವರ ಸಾಹಿತ್ಯ ವ್ಯವಸಾಯದ ವಿವಿಧ ಆಯಾಮಗಳ ಕುರಿತು ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪದವಿಪೂರ್ವ ಕಾಲೇಜು ತನ್ನ ಕನ್ನಡ ಸಂಘದ ಆಶ್ರಯದಲ್ಲಿ ಒಂದು ದಿನ ಪೂರ್ತಿ ಪೆರ್ಲರ ಸಮಗ್ರ ಸಾಹಿತ್ಯಾವಲೋಕನ ಕಾರ್ಯಕ್ರಮವನ್ನು ಆಯೋಜಿಸಿದೆ.
ಇದೇ ಜನವರಿ ದಿನಾಂಕ 11 ರ ಶನಿವಾರದಂದು ಬೆಳಗ್ಗೆ 9.30 ಕ್ಕೆ ಹಂಪಿ ಕನ್ನಡ ವಿ. ವಿ. ಯ ವಿಶ್ರಾಂತ ಕುಲಪತಿ ಡಾ. ಬಿ. ಎ. ವಿವೇಕ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ಣಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಆಗಿರುವ ಎಂ. ಎಸ್. ಮಹಾಬಲೇಶ್ವರ ಭಟ್ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೂರಿಕುಮೇರಿ ಗೋವಿಂದ ಭಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪಕುಮಾರ ಕಲ್ಕೂರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅನಂತರ ಜರಗಲಿರುವ ಮೊದಲ ಗೋಷ್ಠಿಯಲ್ಲಿ ಡಾ. ಪೆರ್ಲರ ಕಾವ್ಯ ಸಾಹಿತ್ಯದ ಬಗ್ಗೆ ಕವಿ ಹಾಗೂ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹಾಗೂ ಡಾ. ಪೆರ್ಲರ ಗದ್ಯ ಸಾಹಿತ್ಯದ ಕುರಿತು ಲೇಖಕಿ ಹಾಗೂ ಮೂಲ್ಕಿ ವಿಜಯಾ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕರಾದ ಡಾ. ಶೈಲಜಾ ಯೇತಡ್ಕ ಪ್ರಬಂಧ ಮಂಡಿಸುವರು. ಅನಂತರ ಸುಗಮ ಸಂಗೀತ ಕಲಾವಿದೆ ರತ್ನಾವತಿ ಜೆ. ಬೈಕಾಡಿ ಪೆರ್ಲರ ಭಾವಗೀತೆಗಳನ್ನು ರಾಗ ಸಂಯೋಜಿಸಿ ಹಾಡಲಿರುವರು.
ಅಪರಾಹ್ನ ಕವಿಗೋಷ್ಠಿ ಜರಗಲಿದ್ದು ಹಿರಿಯ ಕವಿ ರಘುರಾಮ ರಾವ್ ಬೈಕಂಪಾಡಿ ಅವರ ಅಧ್ಯಕ್ಷತೆಯಲ್ಲಿ ಶಶಿಲೇಖಾ ಬಿ., ಡಾ. ಮೀನಾಕ್ಷಿ ರಾಮಚಂದ್ರ, ಎಂ. ಜಿ. ಹೆಗಡೆ ಮಂಗಳೂರು, ಡಾ. ಪಿ. ಬಿ. ಪ್ರಸನ್ನ, ಡಾ. ಜ್ಯೋತಿ ಚೇಳ್ಯಾರು, ರಘು ಇಡ್ಕಿದು ಮತ್ತು ಸುಧಾರಾಣಿ ಸ್ವರಚಿತ ಕವಿತೆಗಳನ್ನು ಮಂಡಿಸುವರು.
ಅಪರಾಹ್ನದ ಎರಡನೇ ಗೋಷ್ಠಿಯಲ್ಲಿ ಮಾಧ್ಯಮ ವ್ಯಕ್ತಿಯಾಗಿ ಡಾ. ಪೆರ್ಲ ಎಂಬ ವಿಷಯದ ಬಗ್ಗೆ ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕಿ ಎನ್. ಉಷಾಲತಾ ಹಾಗೂ ಸಂಘಟಕರಾಗಿ ಡಾ. ಪೆರ್ಲ ಎಂಬ ವಿಷಯದ ಬಗ್ಗೆ ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿಶೋರ್ ಕುಮಾರ್ ರೈ ಶೇಣಿ ಪ್ರಬಂಧ ಮಂಡಿಸಲಿರುವರು.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರಗಲಿದ್ದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ವಿಮರ್ಶಕ ಡಾ. ಎಸ್. ಆರ್. ಅರುಣ್ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಮುಖ್ಯ ಅತಿಥಿಗಳಾಗಿರುವರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ. ಎಸ್. ಎಡಪಡಿತ್ತಾಯ ಅವರು ಅಧ್ಯಕ್ಷತೆ ವಹಿಸಲಿದ್ದು, ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ. ಸಿ. ನಾಯ್ಕ್ ಮತ್ತು ಡಾ. ವಸಂತಕುಮಾರ ಪೆರ್ಲ ಅವರ ಉಪಸ್ಥಿತಿ ಇರಲಿದೆ ಎಂದು ಶಕ್ತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಜನಾರ್ದನ ಬೈಕಾಡಿ ತಿಳಿಸಿದ್ದಾರೆ.
Be the first to comment on "11 ರಂದು ಮಂಗಳೂರಿನಲ್ಲಿ ಡಾ. ಪೆರ್ಲರ ಸಾಹಿತ್ಯಾವಲೋಕನ ಕಾರ್ಯಕ್ರಮ"