- ಭಾನುವಾರ ರಾತ್ರಿ ಮಾತ್ರ ಕರ್ಫ್ಯೂ, ಸೋಮವಾರ ಸಂಪೂರ್ಣ ತೆರವು, ಕ್ರಿಸ್ಮಸ್ ಆಚರಣೆಗೆ ಅಡಚಣೆ ಇಲ್ಲ
ಮುಖಂಡರ ಮನವಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ಬಳಿಕ ಮಂಗಳೂರಿಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ಫ್ಯೂ ಸಡಿಲಗೊಳಿಸುವ ಕುರಿತು ಮಾಹಿತಿ ನೀಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಕರ್ಫ್ಯೂ ಇರುವುದಿಲ್ಲ. ರಾತ್ರಿ ಮತ್ತೆ ಜಾರಿಯಾಗುತ್ತದೆ. ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಸಡಿಲಿಕೆ, ರಾತ್ರಿಯಿಂದ ಸೋಮವಾರ ಬೆಳಿಗ್ಗೆಯವರೆಗೆ ಮತ್ತೆ ಕರ್ಫ್ಯೂ ಜಾರಿ, ನಂತರ ಸೆ.144ರನ್ವಯ ನಿಷೇಧಾಜ್ಞೆಯಷ್ಟೇ ಇರಲಿದೆ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕ್ರಿಸ್ಮಸ್ ಸೇರಿದಂತೆ ಹಬ್ಬ ಆಚರಣೆಗೆ ಅಡ್ಡಿ ಇರುವುದಿಲ್ಲ, ಈ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ ಎಂದವರು ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಹಾರ: ಮಂಗಳೂರು ಹಿಂಸಾಚಾರ ಘಟನೆಯಿಂದ ನೋವಾಗಿದೆ ಎಂದ ಸಿಎಂ ಯಡಿಯೂರಪ್ಪ, ಪೊಲೀಸ್ ಗುಂಡೇಟಿಗೆ ಬಲಿಯಾದವರ ಕುಟುಂಬಿಕರಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಗೋಲಿಬಾರ್ ನಿಂದ ಮೃತಪಟ್ಟ ಕುಟುಂಬಸ್ಥರ ಜತೆಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಅವರ ಭಾವನೆಗಳಿಗೆ ಸ್ಪಂದಿಸಿ ಅವರಿಗೆ ಸಾಂತ್ವನ ಹೇಳಿದ್ದೇನೆ ಎಂದರು.
ಸಮಗ್ರ ವರದಿ: ಹಿಂಸಾತ್ಮಕ ಘಟನೆ ಹಾಗೂ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿರುವ ಘಟನೆ ಸಂಬಂಧ ಸಮಗ್ರವಾದ ವರದಿ ನೀಡಲು ಸೂಚಿಸಿದ್ದೇನೆ ಎಂದು ಇದಕ್ಕೂ ಮುನ್ನ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅಹಿತಕರ ಘಟನೆ ನಡೆದ ಬಗ್ಗೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ಉನ್ನತ ಮಟ್ಟದ ಸಭೆಯನ್ನು ಅವರು ನಡೆಸಿದರು.
Be the first to comment on "ಕರ್ಫ್ಯೂ ಸಡಿಲಿಕೆ, ಸೋಮವಾರದಿಂದ ಇರೋದಿಲ್ಲ, ಘಟನೆ ಸಮಗ್ರ ವರದಿಗೆ ಸೂಚನೆ : ಸಿಎಂ ಯಡಿಯೂರಪ್ಪ"