ವಿಧಾನಸಭೆ ಉಪಚುನಾವಣೆಯ 15 ಕ್ಷೇತ್ರಗಳಲ್ಲಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನಿವಾಸದಲ್ಲಿ ಭಾನುವಾರ ಬೆಳಗ್ಗೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಮಹತ್ವದ ಉಪಚುನಾವಣೆ ಇದಾಗಿದ್ದು, 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ ಎಂದರು. ಫಲಿತಾಂಶದ ನಂತರ ಮಂತ್ರಿಮಂಡಲ ವಿಸ್ತರಣೆ ಆಗಲಿದ್ದು, ಗೆದ್ದ ಬಿಜೆಪಿ ಅಭ್ಯರ್ಥಿಗಳೆಲ್ಲರೂ ಮುಖ್ಯಮಂತ್ರಿ ಮಾತಿನಂತೆ ಸಚಿವರಾಗಲಿದ್ದಾರೆ, ಹೆಚ್ಚು ಕ್ರಿಯಾಶೀಲವಾಗಿ ಸರಕಾರ ಕೆಲಸ ಮಾಡಲು ಇದು ಸಹಕಾರಿಯಾಗಲಿದೆ ಎಂದರು.
ಬೆಂಗಳೂರಿಗೆ ಕಂಬಳ: ಸಾಂಸ್ಕೃತಿಕವಾಗಿ ದೊಡ್ಡ ಹೆಜ್ಜೆ ಇಡುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರವಾಗಿ ಮೂಡಿಸಲು ಕಂಬಳದಂಥ ಕಾರ್ಯಕ್ರಮವನ್ನು ರಾಜಧಾನಿಗೂ ಕೊಂಡೊಯ್ಯಲಿದ್ದೇವೆ ಎಂದವರು ಹೇಳಿದರು.
ಕಂಬಳ, ಯಕ್ಷಗಾನ ಇನ್ನಿತರ ದೈವದ ಕಾರ್ಯಕ್ರಮಗಳು ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ, ಆಚಾರ, ವಿಚಾರ ಒಟ್ಟುಗೂಡಿ, ನಮ್ಮತನದ ಸಂಕೇತ. ಜನರ ಭಾವನೆ ಮತ್ತು ಸಮಾಜವನ್ನು ಒಟ್ಟು ತರುವ ಉತ್ತಮ ಕಾರ್ಯ ಕಂಬಳ ಆಚರಣೆಯಾಗಿದೆ ಎಂದು ಅವರು ಹೇಳಿದರು.
ಎಲ್ಲ ಇದ್ದೂ ಏನೂ ಇಲ್ಲದಂಥ ಸನ್ನಿವೇಶ ಇಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ ವಿಶ್ವಕ್ಕೆ ಮಾದರಿಯಾಗಿ ಕಂಬಳ ನಡೆಸಿಕೊಟ್ಟಿದ್ದು, ಸಂತೋಷ ತರುವ ವಿಚಾರ. ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಸರಕಾರದ ಕರ್ತವ್ಯ ಸಂಸ್ಕೃತಿಯನ್ನು ಉಳಿಸುವುದಾಗಿದ್ದು, ಇದರ ಭಾಗವಾಗಿ ಕಂಬಳ ಉಳಿಸಲು, ಬೆಳೆಸಲು ಹೆಚ್ಚಿನ ಪಾತ್ರ ವಹಿಸಲಿದೆ ಎಂದವರು ಹೇಳಿದರು.
ಐಟಿಗೆ ನೆರವು: ಬೆಂಗಳೂರು ನಗರದಲ್ಲಿ ಸಾಫ್ಟ್ ವೇರ್ ಉದ್ಯಮವನ್ನು ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಆರಂಭಿಸಿದ್ದರು, ಈಗ ಐಟಿ, ಬಿಟಿಯವರು ರಾಜ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದು, ಇದನ್ನು ಬೆಳೆಸಲು ನೀತಿಯೊಂದನ್ನು ಸರಕಾರ ರೂಪಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭ ಉಪಸ್ಥಿತರಿದ್ದರು. ಕಂಬಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಶನಿವಾರ ರಾತ್ರಿ ಶಾಸಕ ರಾಜೇಶ್ ನಾಯ್ಕ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ ಬೆಳಗ್ಗೆ ಬೆಂಗಳೂರಿಗೆ ತೆರಳಿದರು.
www.bantwalnews.com Editor: Harish Mambady
Be the first to comment on "ವಿಧಾನಸಭೆ ಉಪಚುನಾವಣೆ: 12 ಸ್ಥಾನ ಖಚಿತ – ಡಿಸಿಎಂ ಅಶ್ವತ್ಥನಾರಾಯಣ ವಿಶ್ವಾಸ"