ಚರ್ಚ್ ವ್ಯಾಪ್ತಿಯ ಕುಟುಂಬಗಳು ಎಲ್ಲರಿಗೂ ಮಾದರಿ: ಮಂಗಳೂರು ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ದಾನ
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ವ್ಯಾಪ್ತಿಯ ಕುಟುಂಬಗಳ ಒಗ್ಗಟ್ಟು ಎಲ್ಲರಿಗೂ ಮಾದರಿ ಎಂದು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ದಾನಾ ಹೇಳಿದರು.
ಬಂಟ್ವಾಳ ತಾಲೂಕಿನ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬ ಸಮಾರೋಪ ಸಮಾರಂಭದಲ್ಲಿ ಬುಧವಾರ ಚರ್ಚ್ ಪ್ರವೇಶ ದ್ವಾರ ಉದ್ಘಾಟಿಸಿ, ವಿಶೇಷ ಬಲಿಪೂಜೆಯನ್ನು ನಡೆಸಿ, ಆಶೀರ್ವಚನ ನೀಡಿದ ಅವರು, ಚರ್ಚ್ ವ್ಯಾಪ್ತಿಯ ಕುಟುಂಬಗಳು ಚಿಕ್ಕ ವ್ಯಾಪ್ತಿಯಲ್ಲಿದ್ದರೂ ಹಿರಿದಾದ ಕೆಲಸ ಮಾಡಿ ಬಾಂಧವ್ಯ ಸಾರಿದ್ದಾರೆ. ಇತರ ಧರ್ಮೀಯರೊಂದಿಗೆ ಬೆರೆತು ಸಾಮರಸ್ಯ ಸಾರಿದ್ದಾರೆ, ಅಂತರಂಗ ಶುದ್ಧಿಯಾಗಿದ್ದಾಗ ಮಾತ್ರ ನಾವು ದೇವರಿಗೆ ಪ್ರಿಯವಾಗಿರುತ್ತೇವೆ, ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯೇ ಜೀವನದ ಧ್ಯೇಯವಾಗಲಿ ,ಉಸಿರಾಗಲಿ ಎಂದ ಅವರು ಶತಮಾನೋತ್ತರ ಬೆಳ್ಳಿಹಬ್ಬದ ಆಚರಣೆಯ ಮೂಲಕ ಬಂಧುತ್ವಕ್ಕೆ, ಸಾಮರಸ್ಯಕ್ಕೆ ಹೊಸ ಪ್ರೇರಣೆ ಒದಗಿಸಿದ್ದಾರೆ ಎಂದು ಚರ್ಚ್ ವ್ಯಾಪ್ತಿಯ ಕುಟುಂಬಗಳನ್ನು ಶ್ಲಾಘಿಸಿದರು.
ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾತನಾಡಿ ಚರ್ಚ್ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುವುದಾಗಿ ಘೋಷಿಸಿ, ಸಾಮರಸ್ಯದ ಬದುಕಿಗೆ ಚರ್ಚ್ ಮಾದರಿಯಾಗಿದ್ದು, ಕೋಮು ಸಾಮರಸ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡಿದೆ. ೧೨೫ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇದು ಪುಣ್ಯಭೂಮಿಯಾಗಿದೆ ಎಂದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಲಾರೆನ್ಸ್ ಮುಕ್ಕುಝಿ ಮಾತನಾಡಿ, ಚರ್ಚ್‌ನ ವ್ಯಾಪ್ತಿಯ ಮಕ್ಕಳೆಲ್ಲರೂ ಬಾಲಯೇಸುವಿನಂತಿರಬೇಕು, ತಾಯಂದಿರು ಕನ್ಯಾಮಾತೆಯಂತಿರಬೇಕು ಎಂದರು. ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಶುಭಹಾರೈಸಿದರು. ಮೊಗರ್ನಾಡ್ ಚರ್ಚ್‌ನ ಧರ್ಮಗುರು ಡಾ.ಮಾರ್ಕ್ ಕಾಸ್ಟೆಲಿನೋ ಮಾತನಾಡಿ, ಸ್ನೇಹ ಹಾಗೂ ವಿಶ್ವಾಸಮಯ ವಾತಾವರಣ ಬದುಕಿಗೆ ಹೊಸ ಚೈತನ್ಯ ನೀಡುತ್ತದೆ, ಸೂರಿಕುಮೇರು ಚರ್ಚ್ ನಲ್ಲಿ ಈ ಚೈತನ್ಯ ಪಸರಿಸುತ್ತಿದೆ ಎಂದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ಮಾತನಾಡಿ, ವಂದನೀಯ ಫಾದರ್ ಗ್ರೆಗರಿ ಪಿರೇರಾ ರವರು ಚರ್ಚ್‌ನ ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ಕಳೆದ ೨೦೧೮ರ ಸೆಪ್ಟೆಂಬರ್ ೪ ರಿಂದ ಆರಂಭಗೊಂಡು ತಿಂಗಳಿಗೊಂದರಂತೆ ೧೪ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ದೇವಾಲಯ ವ್ಯಾಪ್ತಿಯ ೧೫೨ ಕುಟುಂಬಗಳು ಒಟ್ಟು ಸೇರಿ ಇಲ್ಲಿನ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಚರ್ಚ್ ನ ಶತಮಾನೋತ್ತರ ಬೆಳ್ಳಿಹಬ್ಬದ ಕಾರ್ಯಕ್ರಮಗಳಿಂದ ತೊಡಗಿ, ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ನಡೆಸಲಾಗಿದ್ದು ಎಲ್ಲಾ ಕಾರ್ಯಗಳೂ ಚರ್ಚ್ ವ್ಯಾಪ್ತಿಯ ಕುಟುಂಬಗಳ ತನು ಮನ ಧನದ ಸಹಕಾರದಿಂದಲೇ ನಡೆದಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಪಂ ಸದಸ್ಯ ಪ್ರಭಾಕರ ಪ್ರಭು, ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಸಿಸ್ಟರ್ ನ್ಯಾನ್ಸಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶತಮಾನೋತ್ತರ ಬೆಳ್ಳಿಹಬ್ಬದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಗೆ ತೊಡಗಿಸಿಕೊಂಡ ಕುಟುಂಬಗಳನ್ನು ಗುರುತಿಸಿ ಗೌರವಿಸಲಾಯಿತು. ಅತಿಥಿಗಳ ಸ್ವಾಗತಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ ಸ್ವಾಗತಿಸಿದರು. ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ವಂದಿಸಿದರು. ಸ್ಟ್ಯಾನಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ: ಶತಮಾನೋತ್ತರ ಬೆಳ್ಳಿಹಬ್ಬದ ಅಂಗವಾಗಿ ನಡೆಸಲಾಗಿದ್ದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಇದೇ ವೇಳೆ ಲೋಕಾರ್ಪಣೆಗೊಳಿಸಲಾಯಿತು. ನೂತನವಾಗಿ ನಿರ್ಮಿಸಲಾದ ಆಕರ್ಷಕ ಪ್ರವೇಶದ್ವಾರ, ಇಸ್ರೇಲ್ ಮಾದರಿಯ ಪುಟ್ ಪಾತ್ ರಸ್ತೆ , ಕಲ್ವಾರಿ ಪರ್ವತದ ೧೪ ಶಿಲುಬೆ ಯಾತ್ರೆ, ಕಾಂಕ್ರೀಟು ರಸ್ತೆ ನಿರ್ಮಾಣ, ಸೋಲಾರ್ ಲೈಟ್, ಧ್ವನಿವರ್ಧಕ ವ್ಯವಸ್ಥೆ, ಸಿ.ಸಿ.ಕ್ಯಾಮೆರಾ ಅಳವಡಿಕೆ,ರಸ್ತೆಯ ಇಕ್ಕೆಲಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಉದ್ಘಾಟನೆಯನ್ನೂ ಅತಿಥಿಗಣ್ಯರು ನೆರವೇರಿಸಿದರು.
ಸೌಹಾರ್ದತೆಗೆ ಸಾಕ್ಷಿ: ಹಿಂದು, ಮುಸ್ಲಿಂ ಬಾಂಧವರೂ ಕಾರ್ಯಕ್ರಮಕ್ಕೆ ನೆರವಾಗುವ ಮೂಲಕ ಸೌಹಾರ್ದ ಮೆರೆದರು. ಪುರುಷೋತ್ತಮ ಪಾಟೀಲ, ಓಂಪ್ರಕಾಶ್ ಜುವೆಲ್ಲರಿ, ಎಸ್.ಎ.ಖಾಸಿಂ, ಚಿದಾನಂದ, ಸತೀಶ್ ಮತ್ತು ಗಣೇಶ್ ಜುವೆಲ್ಲರಿಯವರು ಕಾರ್ಯಕ್ರಮಕ್ಕೆ ಅಗತ್ಯವಿದ್ದ ಕೊಡುಗೆ ನೀಡಿ ಸೌಹಾರ್ದ ಮೆರೆದರು
Be the first to comment on "ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಶತಮಾನೋತ್ತರ ಬೆಳ್ಳಿಹಬ್ಬ ಸಮಾರೋಪ"