ಬಂಟ್ವಾಳ ತಾಲೂಕು ಮುಖ್ಯೋಪಾಧ್ಯಾಯರೊಂದಿಗಿನ ಸಭೆಯಲ್ಲಿ ಪ್ರಶ್ನೆ
ಬಂಟ್ವಾಳ: ಶಿಕ್ಷಕರು ಮೀಟಿಂಗ್, ಕಾಂಪಟೀಶನ್ ಗೆಂದು ಹೋದರೆ, ಪಾಠ ಮಾಡೋವ್ರು ಯಾರು? ಪಾಠ ಹೇಳುವುದರಲ್ಲಿ ನಿರಂತರತೆಯನ್ನು ಕಾಯ್ದುಗೊಳ್ಳದೇ ಇದ್ದರೆ ಉತ್ತಮ ಫಲಿತಾಂಶ ದೊರೆಯುವುದು ಹೇಗೆ ಎಂಬ ಸಮಸ್ಯೆಯನ್ನು ಮುಖ್ಯೋಪಾಧ್ಯಾಯರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಲ್ಲಿ ಸೋಮವಾರ ಮಂಡಿಸಿದರು.
ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮುಖ್ಯೋಪಾಧ್ಯಾಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಹಲವು ವಿಚಾರಗಳು ಚರ್ಚೆಗೊಳಗಾದವು.
ಬಂಟ್ವಾಳ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉಳಿದ ತಾಲೂಕುಗಳಿಗಿಂತ ಕಡಿಮೆಯಾಗಿರುವ ಕಾರಣ ಇದನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಸಲಹೆಗಳನ್ನು ಶಾಸಕರು ಕೇಳಿದಾಗ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.
ಶಾಲೆಯಲ್ಲಿ ಸಭೆ ಕರೆದರೆ, ಹೆತ್ತವರೇ ಬರುವುದಿಲ್ಲ. 8ನೇ ತರಗತಿಗೆ ಬರುವ ಮಕ್ಕಳಲ್ಲಿ ಕಾಗುಣಿತ ಬರದವರೇ ಜಾಸ್ತಿ. ಹೆಡ್ಮಾಸ್ಟರ್ ಕೆಲವೊಮ್ಮೆ ಅಟೆಂಡರ್ ಕೆಲಸವನ್ನು ಮಾಡಬೇಕಾಗುತ್ತದೆ. ಮೀಟಿಂಗುಗಳನ್ನು ಕಡಿಮೆ ಮಾಡಿ, ಸುತ್ತೋಲೆಗಳಲ್ಲೇ ಹೇಳಬೇಕಾದ್ದನ್ನು ತಿಳಿಸಿದರೆ ಶಾಲೆ ಬಿಟ್ಟು ಹೊರಗೆ ಹೋಗುವುದು ತಪ್ಪುತ್ತದೆ ಹೀಗೆ ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.
ಶಾಲೆಗಳಿಗೆ ಮೂಲಸೌಕರ್ಯ ಕೊರತೆ ಇದ್ದುದರ ಪಟ್ಟಿ ಮಾಡಿ, ತನ್ನ ಹಾಗೂ ಸಿಎಸ್ ಆರ್ ನಿಧಿಗಳ ನೆರವಿನಿಂದ ಒದಗಿಸಲು ಪ್ರಯತ್ನಿಸುವೆ ಎಂದ ಶಾಸಕ ರಾಜೇಶ್ ನಾಯ್ಕ್, ಶಿಕ್ಷಕರು ಮಂಡಿಸಿದ ಸಮಸ್ಯೆಗಳು ಗಂಭೀರವೂ ಆಗಿದ್ದು, ಇವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗಮನಕ್ಕೆ ತರಲಾಗುವುದು ಎಂದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಹೈಸ್ಕೂಲ್ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಮತ್ತಿತರರು ವಿಚಾರ ಮಂಡಿಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಷೇತ್ರ ಸಂಪನ್ಮೂಲ ಸಮಯನ್ವಧಿಕಾರಿ ರಾಧಾಕೃಷ್ಣ ಭಟ್, ಶಿಕ್ಷಣ ಇಲಾಖಾಧಿಕಾರಿ ಸುಶೀಲಾ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
www.bantwalnews.com Editor: Harish Mambady
Be the first to comment on "ಶಿಕ್ಷಕರು ಮೀಟಿಂಗ್, ಕಾಂಪಟೀಶನ್ ಗೆಂದು ಹೋದರೆ, ಪಾಠ ಮಾಡೋವ್ರು ಯಾರು?"