ತಮ್ಮ ತೋಟ, ಮನೆಯ ಹೂದೋಟದಲ್ಲಿ ಜೇನು ಸಾಕುವುದರಿಂದ ಆದಾಯವನ್ನೂ ಗಳಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ ಇರಾದ ಮಲಯಾಳಿ ಬಿಲ್ಲವ ಸೇವಾ ಸಂಘದ ಸಭಾಂಗಣದಲ್ಲಿ ಎರಡು ದಿವಸಗಳ ಜೇನು ಕೃಷಿ ತರಬೇತಿಯನ್ನು ಆಸಕ್ತ ಜೇನು ಕೃಷಿಕರಿಗಾಗಿ ನಡೆಸಲಾಗಿತ್ತು. ಈ ಸಂದರ್ಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರು ತೋಟದ ಬೆಳೆಯೊಂದಿಗೆ ಉಪಕಸುಬಾಗಿ ಜೇನು ಸಾಕಾಣಿಕೆ ಮಾಡಿ ಹೆಚ್ಚು ಆದಾಯಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿಕೊಳ್ಳಲು ಸಾದ್ಯವಿದೆ ಎಂದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಜಾಕ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷರಾದ ಅಬ್ಬಾಸ್ ಆಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೀರಪ್ಪ ಗೌಡ ಸುಳ್ಯ ಇವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ತೋಟಗಾರಿಕೆ ಇಲಾಖೆ ಅಧಿಕಾರಿ ದಿನೇಶ್ ಪ್ರಸ್ತಾವನೆಗೈದರು. ಇಲಾಖೆಯ ಅಧಿಕಾರಿಗಳಾದ ರೆಹಾನಾ ಬೇಗಂ, ಹರೀಶ್ ಹಾಗೂ ಪಂಚಾಯತ್ ಕಾರ್ಯದರ್ಶಿ ನಳಿನಿ ಎ.ಕೆ. ಉಪಸ್ಥಿತರಿದ್ದರು.
Be the first to comment on "ಜೇನು ಕೃಷಿಯಿಂದ ಹೆಚ್ಚಿನ ಆದಾಯ ಸಾಧ್ಯ: ಮಮತಾ ಗಟ್ಟಿ"